26 ವರ್ಷಗಳ ಹಳೆಯ ಕೇಸ್ ಗೆ 'ಕೈ' ನಾಯಕ, ನಟ ರಾಜ್ ಬಬ್ಬರ್ ಗೆ 2ವರ್ಷಗಳ ಕಾರಾಗೃಹ ಶಿಕ್ಷೆ
Friday, July 8, 2022
ಮುಂಬೈ: ಚುನಾವಣಾ ಅಧಿಕಾರಿಯ ಮೇಲೆ ಹಲ್ಲೆಗೈದಿರುವ 1996ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ, 'ಕೈ' ನಾಯಕ ರಾಜ್ ಬಬ್ಬರ್ ಗೆ ಲಕ್ನೋ ನ್ಯಾಯಾಲಯ 2ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ಅದೇ ನ್ಯಾಯಾಲಯ ಅವರಿಗೆ ಜಾಮೀನು ಅಂಗೀಕರಿಸಿದೆ. ಸರಕಾರಿ ನೌಕರನಿಗೆ ಕರ್ತವ್ಯ ನಿರ್ವಹಿಸದಂತೆ ತಡೆ ಒಡ್ಡಿರುವ ಕಾರಣ ಸೇರಿದಂತೆ ಇತರ ಮೂರು ಕಾರಣಗಳಿಗೆ ರಾಜ್ ಬಬ್ಬರ್ ಗೆ ಈ ಶಿಕ್ಷೆ ವಿಧಿಸಿ 6,500 ರೂ. ದಂಡ ವಿಧಿಸಲಾಗಿದೆ.
ರಾಜ್ ಬಬ್ಬರ್ 1996ರಲ್ಲಿ ಸಮಾಜವಾದಿ ಪಕ್ಷದಿಂದ ಲಕ್ನೋದಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಮತದಾನದ ದಿನ ಅವರು ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆಗೆ ನುಗ್ಗಿದ್ದರು. ಅವರನ್ನು ತಡೆದ ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದರು ಎಂದು ಎಫ್ಐಆರ್ ನಲ್ಲಿ ದಾಖಲಾಗಿತ್ತು.