ಛತ್ತೀಸ್ ಗಢ: ದಾರಿಯಲ್ಲಿ ಸಿಕ್ಕ 45 ಲಕ್ಷ ರೂ. ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
Sunday, July 24, 2022
ರಾಯ್‌ಪುರ : ಛತ್ತಿಸ್ ಗಢ ರಾಜ್ಯದ ರಾಜಧಾನಿ ರಾಯ್‌ಪುರದಲ್ಲಿ ಶನಿವಾರ ಸಂಚಾರಿ ಪೊಲೀಸ್ ಸಿಬ್ಬಂದಿ ದಾರಿಯಲ್ಲಿ ಸಿಕ್ಕಿದ 45 ಲಕ್ಷ ರೂ. ಇದ್ದ ಬ್ಯಾಗನ್ನು ಸ್ಥಳೀಯ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನವ ರಾಯ್‌ಪುರದ ಕಯಾಬಂಧ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಿಲಂಬರ್ ಸಿನ್ಹಾರಿಗೆ ಬೆಳಗ್ಗಿನ ವೇಳೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ದಾರಿಯಲ್ಲಿ ಬ್ಯಾಗ್ ಒಂದು ದೊರಕಿತ್ತು. ಈ ಬ್ಯಾಗ್ ಅನ್ನು ಪರಿಶೀಲಿಸಿದ ವೇಳೆ ಅದರೊಳಗೆ 2 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ 45 ಲಕ್ಷ ರೂ. ಪತ್ತೆಯಾಗಿದೆ. ತಕ್ಷಣ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಬ್ಯಾಗ್ ಅನ್ನು ಸಿವಿಲ್ ಲೈನ್ಸ್ ಠಾಣೆಗೆ ಹಸ್ತಾಂತರಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ತಿಳಿಸಿದ್ದಾರೆ.
ಹಣವಿದ್ದ ಬ್ಯಾಗ್ ನೀಡಿ ಪ್ರಾಮಾಣಿಕತೆ ಮೆರೆದ ಸಿನ್ಹಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ. ಈ ಹಣದ ಮೂಲವನ್ನು ಕಂಡುಹಿಡಿಯಲು ಸಿವಿಲ್ ಲೈನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.