'ಪೊಲೀಸರಿಗೆ ಅಶ್ಲೀಲ ಸನ್ನೆ ಮಾಡುತ್ತಿದ್ದಾತ ಕೊನೆಗೂ ಅರೆಸ್ಟ್'... ತನಿಖೆ ವೇಳೆ ಈತನ ಮೇಲಿದ್ದ 55 ಪ್ರಕರಣಗಳು ಬಯಲು
Wednesday, July 6, 2022
ಬೆಂಗಳೂರು: ದ್ವಿಚಕ್ರ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಓಡಾಟ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ಅಶ್ಲೀಲವಾಗಿ ಕೈಸನ್ನೆ ಮಾಡುತ್ತಿದ್ದಾತ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಪಟ್ಟೇಗಾರಪಾಳ್ಯ ನಿವಾಸಿ ಆರ್.ನಿಖಿಲ್ ಬಂಧಿತ ಆರೋಪಿ.
ಜು.3ರಂದು ಬೆಳಗ್ಗೆ ವಿಜಯನಗರ ಮಾರೇನಹಳ್ಳಿ ಜಂಕ್ಷನ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಈತ ಅತಿ ವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಆಗ ಪೊಲೀಸರು ಆತನ ನಂಬರ್ ಪ್ಲೇಟ್ ಫೋಟೋ ತೆಗೆಯಲು ಯತ್ನಿಸಿದಾಗ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದಾನೆ. ಈ ವೇಳೆ ನಿಖಿಲ್ ನನ್ನು ಹಿಡಿಯಲು ಸಾರ್ವಜನಿಕರು ಸುತ್ತುವರಿದಿದ್ದಾರೆ. ಅಷ್ಟರಲ್ಲಿ ಆತ ದ್ವಿಚಕ್ರ ವಾಹನ ಬಿಟ್ಟು ಓಡಿದ್ದಾನೆ.
ಈತನ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ಅದು ನಕಲಿ ನಂಬರ್ ಪ್ಲೇಟ್ ಎಂದು ತಿಳಿದು ಬಂದಿದೆ. ಅಲ್ಲದೆ ಈತನ ಮೇಲೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 55 ಪ್ರಕರಣಗಳು ದಾಖಲಾಗಿದೆ. ಇದೀಗ ಈತನ ದ್ವಿಚಕ್ರ ವಾಹನ ಜಪ್ತಿ ಮಾಡಿ 28,500 ರೂ. ದಂಡ ವಸೂಲಿ ಮಾಡಿದ್ದಾರೆ. ಇದೀಗ ಆರೋಪಿ ನಿಖಿಲ್ ಆರ್.ನನ್ನೂ ಪೊಲೀಸರು ಬಂಧಿಸಿದ್ದಾರೆ.