ಮಂಗಳೂರು: ರಸ್ತೆ ದಾಟುವ ವೇಳೆ ಬೈಕ್ ಅಪಘಾತದಲ್ಲಿ ಮಕ್ಕಳು ಪಾರು; ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ
Monday, July 18, 2022
ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಮಕ್ಕಳಿಬ್ಬರಿಗೆ ಬೈಕ್ ಡಿಕ್ಕಿಯಾಗಿರುವ ಘಟನೆ ನಗರದ ಕೂಳೂರು ಸಮೀಪದ ಪಂಜಿಮೊಗರಿನಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆದೆ. ಡಿಕ್ಕಿಯ ರಭಸಕ್ಕೆ ಮಕ್ಕಳು ರಸ್ತೆಗೆಸೆಯಲ್ಪಟ್ಟಿರುವ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಮಕ್ಕಳಿಬ್ಬರು ಶಾಂತಿನಗರ ನಿವಾಸಿಗಳೆಂದು ತಿಳಿದು ಬಂದಿದೆ. ಇವರಿಬ್ಬರೂ ಯಾವುದೋ ಕಾರ್ಯಕ್ಕೆ ಪಂಜಿಮೊಗರಿಗೆ ಬಂದಿದ್ದರು. ಈ ವೇಳೆ ರಸ್ತೆ ದಾಟಲೆಂದು ಅವರು ನಿಂತಿದ್ದರು. ಬಸ್ ಒಂದು ನಿಲ್ದಾಣದಲ್ಲಿ ನಿಂತಿದ್ದು ಅದು ಹೊರಟ ತಕ್ಷಣ ಮಕ್ಕಳು ರಸ್ತೆ ದಾಟಲು ಯತ್ನಿಸಿದ್ದಾರೆ. ಆಗ ಇನ್ನೇನು ರಸ್ತೆಯ ಅಂಚಿಗೆ ಅವರಿಬ್ಬರು ತಲುಪಬೇಕನ್ನುವಷ್ಟರಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್ ಒಂದು ಡಿಕ್ಕಿ ಹೊಡೆದಿದೆ.
ಪರಿಣಾಮ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಅವರಲ್ಲಿ ಓರ್ವ ಬಾಲಕ ತಕ್ಷಣ ಮೇಲೆದ್ದೆರೂ, ಮತ್ತೋರ್ವನನ್ನು ಅನತಿ ದೂರದವರೆಗೆ ಬೈಕ್ ಎಳೆದೊಯ್ದಿದೆ. ಅಪಘಾತದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ತಕ್ಷಣ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.