ಸುರತ್ಕಲ್: ಲಾರಿ ಹರಿದು ಬೈಕ್ ಸವಾರ ಅರ್ಚಕ ಸ್ಥಳದಲ್ಲಿಯೇ ದುರ್ಮರಣ
Friday, July 22, 2022
ಸುರತ್ಕಲ್: ಲಾರಿಯೊಂದು ಬೈಕ್ ಸವಾರನ ಮೇಲೆ ಹರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ನಿನ್ನೆ ರಾತ್ರಿ ಸುರತ್ಕಲ್ ನ ಗೋವಿಂದ ದಾಸ ಕಾಲೇಜು ಮುಂಭಾಗ ನಡೆದಿದೆ.
ಕಟಪಾಡಿ ಮಟ್ಟು ನಿವಾಸಿ ಅರ್ಚಕ ಅಕ್ಷಯ್ ಕೆ. ಆರ್. (33) ಮೃತಪಟ್ಟ ದುರ್ದೈವಿ.
ಅಕ್ಷಯ್ ಕೆ. ಆರ್. ಅವರು ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದ್ವಿಚಕ್ರ ವಾಹನದಲ್ಲಿ ಕಟಪಾಡಿಯ ತಮ್ಮ ಮನೆಗೆ ನಿನ್ನೆ ರಾತ್ರಿ ತೆರಳುತ್ತಿದ್ದರು. ಈ ವೇಳ ಸುರತ್ಕಲ್ ನ ಗೋವಿಂದ ದಾಸ ಕಾಲೇಜು ಮುಂಭಾಗದಲ್ಲಿ ವಾಹನ ದಟ್ಟಣೆ ಇತ್ತು. ಪರಿಣಾಮ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಈ ವೇಳೆ ಅಕ್ಷಯ್ ಅವರ ಬಲಭಾಗದಲ್ಲಿ ಲಾರಿ ಚಲಿಸುತ್ತಿತ್ತು. ದ್ವಿಚಕ್ರವಾಹನದಲ್ಲಿದ್ದ ಅಕ್ಷಯ್ ಅವರು ಲಾರಿಗೆ ತಾಗಿ ರಸ್ತೆಗೆ ಹತ್ತಿದ್ದಾರೆ. ಪರಿಣಾಮ ನಿಯಂತ್ರಣ ಕಳೆದುಕೊಂಡ ಅವರು ಬಿದ್ದಿದ್ದಾರೆ. ಈ ವೇಳೆ ಲಾರಿಯ ಹಿಂಭಾಗದ ಚಕ್ರವು ಅಕ್ಷಯ್ ಅವರ ತಲೆ ಮೇಲಿಂದ ಹಾದು ಹೋಗಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಅರ್ಧ ತಾಸಿಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಹಿತಗೊಂಡಿತ್ತು.
ಘಟನೆ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತಕ್ಕೀಡಾದ ಲಾರಿ ಮತ್ತು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಎಂದು ತಿಳಿದು ಬಂದಿದೆ.
ಮೃತಪಟ್ಟ ಅಕ್ಷಯ್ ಕೆ.ಆರ್. ಅವರು ಉಡುಪಿಯ ಕಟಪಾಡಿ ಬಳಿಯ ಮಟ್ಟು ನಿವಾಸಿಯಾಗಿದ್ದು,
ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾಗಿದ್ದಾರೆ. ಪೂಜಾ ಕೈಂಕರ್ಯ ನಡೆಸುತ್ತಿದ್ದ ಅವರು ಸುರತ್ಕಲ್ ನಲ್ಲಿ ಪೂಜೆ ಮುಗಿಸಿ ಕಟಪಾಡಿ ಗೆ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಮೃತರು ತಾಯಿಯನ್ನು ಅಗಲಿದ್ದಾರೆ.