ಡ್ರಗ್ಸ್ ಜಾಲ ಬೇಧಿಸಲು ಹೋದ ರಾಜ್ಯದ ಪೊಲೀಸರು ಆಂಧ್ರಪ್ರದೇಶದಲ್ಲಿ ಅಪಘಾತಕ್ಕೆ ಬಲಿ: ಶಿವಾಜಿನಗರ ಪೊಲೀಸರಿಬ್ಬರು ಸೇರಿ ಮೂವರು ಮೃತ್ಯು
Sunday, July 24, 2022
ಬೆಂಗಳೂರು: ಆಂಧ್ರಪ್ರದೇಶ ರಾಜ್ಯದ ಚಿತ್ತೂರಿನಲ್ಲಿ ಡ್ರಗ್ಸ್ ಜಾಲವನ್ನು ಬೇಧಿಸಲು ಹೊರಟ ಬೆಂಗಳೂರಿನ ಶಿವಾಜಿ ನಗರ ಪೊಲೀಸ್ ಠಾಣಾ ವಾಹನ ರವಿವಾರ ಮುಂಜಾನೆ ಭೀಕರ ರಸ್ತೆ ಅಪಘಾತಕ್ಕೊಳಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿ ಸಹಿತ ಮೂವರು ಮೃತಪಟ್ಟಿರುವುದು ವರದಿಯಾಗಿದೆ.
ಮೃತರನ್ನು ಶಿವಾಜಿ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವಿನಾಶ್, ಕಾನ್ ಸ್ಟೇಬಲ್ ಅನಿಲ್ ಹಾಗೂ ಖಾಸಗಿ ಕಾರು ಚಾಲಕ ಜೋಸೆಫ್ ಎಂದು ಗುರುತಿಸಲಾಗಿದೆ.
ಚಿತ್ತೂರಿನಿಂದ ತಿರುಮಲಕ್ಕೆ ಹೋಗುವ ರಸ್ತೆಯ ಪೂತಲಪಟ್ಟು ಮಂಡಲದ ಪಿ.ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಈ ಅಪಘಾತ ಮುಂಜಾನೆ 3 ಗಂಟೆ ಸುಮಾರಿಗೆ ಈ ನಡೆದಿದೆ ಎಂದು ತಿಳಿದುಬಂದಿದೆ.
ಶಿವಾಜಿ ನಗರದ ಸಬ್ ಇನ್ಸ್ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎ ದೀಕ್ಷಿತ್, ಪೊಲೀಸ್ ಕಾನ್ ಸ್ಟೇಬಲ್ ಅನಿಲ್ ಸೇರಿ ಆರು ಮಂದಿಯ ತಂಡ ಡ್ರಗ್ಸ್ ಜಾಲವೊಂದರ ಜಾಡು ಹಿಡಿದು ನಿನ್ನೆ ರಾತ್ರಿ ಆಂಧ್ರಪ್ರದೇಶದತ್ತ ಹೊರಡಲು ತೀರ್ಮಾನಿಸಿತ್ತು. ಇದಕ್ಕಾಗಿ ಕ್ಯಾಬ್ ವೊಂದನ್ನು ಬಾಡಿಗೆಗೆ ಗೊತ್ತು ಮಾಡಿದ್ದರು. ಅದರಂತೆ ತಂಡವು ಜೋಸೆಫ್ ಅವರ ಇನೋವಾ ಕಾರಿನಲ್ಲಿ ಹೊರಟಿತ್ತು.
ಆದರೆ ಇವರು ಸಂಚರಿಸುತ್ತಿದ್ದ ಕಾರು ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸುಮಾರು 30 ಅಡಿ ದೂರಕ್ಕೆ ರಸ್ತೆಯ ಇನ್ನೊಂದು ಬದಿಗೆ ಎಸೆಯಲ್ಪಟ್ಟಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಕಾನ್ ಸ್ಟೇಬಲ್ ಶರಣಬಸಪ್ಪ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.