
ಮಂಗಳೂರು: ಹಣ ಸುಲಿಗೆ, ದರೋಡೆಗೆ ಸಂಚು ರೂಪಿಸಿ ಹೊಂಚು ಹಾಕುತ್ತಿದ್ದ ನಾಲ್ವರು ದುಷ್ಕರ್ಮಿಗಳು ಅರೆಸ್ಟ್
Saturday, July 16, 2022
ಮಂಗಳೂರು: ಅಕ್ರಮವಾಗಿ ತಂಡ ಮಾಡಿಕೊಂಡು ಸಾರ್ವಜನಿಕರು, ವ್ಯಾಪಾರಿಗಳು, ಶ್ರೀಮಂತರನ್ನು ಬೆದರಿಸಿ ಹಣ ಸುಲಿಗೆ, ದರೋಡೆ ಮಾಡಲು ಸಂಚು ರೂಪಿಸಿ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಬಂದರು ಠಾಣಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಕುದ್ರೋಳಿ ನಿವಾಸಿಗಳಾದ ಅನಿಶ್ ಅಶ್ರಫ್ ಯಾನೆ ಮಯಾ (24 ), ಮುಹಮ್ಮದ್ ಕಾಮಿಲ್ ( 33 ), ಮೂಲತಃ ಬಜ್ಪೆ ನಿವಾಸಿ ಪ್ರಸ್ತುತ ಕುದ್ರೋಳಿ ವಾಸಿ ಶೇಖ್ ಮುಹಮ್ಮದ್ ಹಾರಿಸ್ ಯಾನೆ ಜಿಗರ್ ( 32 ), ಕಸ್ಬಾ ಬೆಂಗ್ರೆ ನಿವಾಸಿ ಮುಹಮ್ಮದ್ ಕೈಸ್ (26) ಬಂಧಿತ ಆರೋಪಿಗಳು. ಬಂಧಿತ ದುಷ್ಕರ್ಮಿಗಳಿಂದ ತಲವಾರು, ಚೂರಿ, ಮೆಣಸಿನ ಹುಡಿಯನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ.
ಈ ನಾಲ್ವರು ದುಷ್ಕರ್ಮಿಗಳು ಅಕ್ರಮವಾಗಿ ಕೂಟ ಸೇರಿಕೊಂಡು ಮಾರಕಾಯುಧಗಳನ್ನು ಹಿಡಿದುಕೊಂಡು ವ್ಯಾಪಾರಿಗಳು, ಶ್ರೀಮಂತರು, ಸಾರ್ವಜನಿಕರನ್ನು ಬೆದರಿಸಿ ಹಣ ಸುಲಿಗೆ, ದರೋಡೆ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಕ್ರಮ ಕೂಟ ಸೇರಿದ್ದ ಆರು ಮಂದಿಯ ಪೈಕಿ ಮೂವರು ಮಾರಕಾಯುಧವನ್ನು ಹೊಂದಿದ್ದರು. ದಾಳಿಯ ವೇಳೆ ಹಳೆಯ ಪ್ರಕರಣದ ಆರೋಪಿ ಅಬ್ದುಲ್ ಖಾದರ್ ಫಹಾದ್ ಹಾಗೂ ತಲವಾರು ಹಿಡಿದುಕೊಂಡಿದ್ದ ಮತ್ತೋರ್ವ ಆರೋಪಿಯು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಬಂಧಿತರಲ್ಲಿ ನಾಲ್ವರೂ ರೌಡಿಶೀಟರ್‌ಗಳಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಇವರುಗಳ ಮೇಲೆ ಪ್ರಕರಣ ದಾಖಲಾಗಿದೆ.