ಮಂಗಳೂರು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹೋರಿ ವಶಕ್ಕೆ; ಐವರು ಅಂದರ್
Saturday, July 2, 2022
ಮಂಗಳೂರು: ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹೋರಿಯೊಂದರ ಸಹಿತ ಐವರು ಆರೋಪಿಗಳನ್ನು ಬಜ್ಪೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರಿನ ಅಡ್ಡೂರು ಗ್ರಾಮ ನಿವಾಸಿಗಳಾದ ಮಹಮ್ಮದ್ ಜಮಾಲ್(39), ಮಹಮ್ಮದ್ ಶರೀಫ್ (49), ಮಹಮ್ಮದ್ ರಿಯಾಝ್(30), ಮೂಡುಬಿದಿರೆ ತಾಲೂಕಿನ ಅಶ್ವತ್ಥಪುರದ ತೆಂಕ ಮಿಜಾರು ಗ್ರಾಮದ ಆನಂದ ಗೌಡ(52), ಮೋಹನಗೌಡ(49) ಬಂಧಿತ ಆರೋಪಿಗಳು.
ಬಜ್ಪೆ ಠಾಣಾ ವ್ಯಾಪ್ತಿಯ ಕೊಂಪದವು ಎಂಬಲ್ಲಿ ಪಿಕ್ ಅಪ್ ವಾಹನವೊಂದರಲ್ಲಿ ಹೋರಿಯೊಂದನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಬಜ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಂದು ಹೋರಿ ಹಾಗೂ ಪಿಕ್ ಅಪ್ ವಾಹನವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.