![ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ತತ್ತರಿಸಿದ ಸರ್ಕಾರ:ಜನೋತ್ಸವ ರದ್ದು, ತಡರಾತ್ರಿ ಘೋಷಣೆ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ತತ್ತರಿಸಿದ ಸರ್ಕಾರ:ಜನೋತ್ಸವ ರದ್ದು, ತಡರಾತ್ರಿ ಘೋಷಣೆ](https://blogger.googleusercontent.com/img/b/R29vZ2xl/AVvXsEhxvIt1LzZ0jMUwWYWvEN-dkCCY82p3vdaNd9CDJ-PRi2kxUHsSBP0F4E8dbI21b_cPjbQVEgK52EM2wIIG5b_oM7PXaFvePGYOIRXTJ5RJOIV04XEE-oPA69_y1jsV5IFOb2Ecn07WJs_z/s1600/1658970057928406-0.png)
ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ತತ್ತರಿಸಿದ ಸರ್ಕಾರ:ಜನೋತ್ಸವ ರದ್ದು, ತಡರಾತ್ರಿ ಘೋಷಣೆ
ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ತತ್ತರಿಸಿದ ಸರ್ಕಾರ:ಜನೋತ್ಸವ ರದ್ದು, ತಡರಾತ್ರಿ ಘೋಷಣೆ
ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ಹತ್ಯೆ ಪ್ರಕರಣದಿಂದ ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿದ್ದು, ಇದರಿಂದ ಸರ್ಕಾರ ವಸ್ತುಶಃ ತತ್ತರಿಸಿ ಹೋಗಿದೆ.
ತಡರಾತ್ರಿ 12-15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಆರ್.ಟಿ. ನಗರದ ನಿವಾಸದಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದು, ಸರ್ಕಾರದ ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲು,ಸ್ಥಳೀಯ ಶಾಸಕರೂ ಆದ ಸಚಿವ ಅಂಗಾರ, ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನೆಯ ತೀವ್ರತೆ ಎಷ್ಟಿತ್ತೆಂದರೆ, ನಳಿನ್ ಅವರ ಕಾರನ್ನು ಅಲ್ಲಾಡಿಸಿ ಟೈರ್ ಪಂಕ್ಚರ್ ಮಾಡಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸರಣಿ ಘಟನೆಗಳು ವರದಿಯಾಗಿದ್ದವು.
ಈ ಎಲ್ಲ ಘಟನೆಗಳ ತೀವ್ರತೆಯಿಂದ ಬೆಚ್ಚಿಬಿದ್ದ ಸರ್ಕಾರ, ಗುರುವಾರ ನಡೆಯಬೇಕಿದ್ದ ಜನೋತ್ಸವದ ಕಾರ್ಯಕ್ರಮವನ್ನು ರದ್ದು ಮಾಡಿದೆ.
ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ತಡರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆ ತೀವ್ರ ನೋವನ್ನು ತಂದಿದೆ ಎಂದು ಹೇಳಿದರು.
ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಹಾಗೂ ಶಿವಮೊಗ್ಗದ ಹರ್ಷನ ತಾಯಿ ನೋವನ್ನು ನೋಡಿ ಈ ನಿರ್ಧಾರ ಕೈಗೊಂಡಿದ್ದೇನೆ. ನಾವು ಜನಪರವಾಗಿ ಏನೆಲ್ಲಾ ಕೆಲಸ ಮಾಡಿದ್ದೇವೆ, ಅದು ಜನರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಉದ್ದೇಶದಿಂದ ಈ ಜನೋತ್ಸವ ಸಾಧನಾ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಇದೀಗ ನಾವು ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ ಎಂದು ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ನಡೆಯಲಿದ್ದ ಜನೋತ್ಸವ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದರು.