-->
ಕಾಣಿಯೂರು ಹೊಳೆಗೆ ಬಿದ್ದ ಕಾರು ಪ್ರಕರಣ: ಅಪಘಾತದ ಬಳಿಕವೂ ಮೊಬೈಲ್ ಬಳಸಿರುವ ಯುವಕರು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಕಾಣಿಯೂರು ಹೊಳೆಗೆ ಬಿದ್ದ ಕಾರು ಪ್ರಕರಣ: ಅಪಘಾತದ ಬಳಿಕವೂ ಮೊಬೈಲ್ ಬಳಸಿರುವ ಯುವಕರು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಂಗಳೂರು: ಸೇತುವೆಗೆ ಢಿಕ್ಕಿ ಹೊಡೆದು ಹೊಳೆಗೆ ಉರುಳಿ ಬಿದ್ದ ಕಾರಿನಲ್ಲಿದ್ದ ಯುವಕರಿಬ್ಬರು ನಾಪತ್ತೆಯಾಗಿರೋದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಕಾರು ನಜ್ಜುಗುಜ್ಜಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಹೊಳೆಯಿಂದ ಮೇಲೆತ್ತಲಾಗಿದೆ. ಘಟನಾ ಸ್ಥಳದಿಂದ 500 ಮೀ. ದೂರದಲ್ಲಿ ಕಾರು ಪತ್ತೆಯಾಗಿದೆ.

ಶನಿವಾರ ರಾತ್ರಿ 12:05ಕ್ಕೆ ಕಾಣಿಯೂರು ಬಳಿಯ ಬೈತ್ತಡ್ಕ ಎಂಬಲ್ಲಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಮಸೀದಿ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಆದರೆ ಈ ಕಾರಿನಲ್ಲಿದ್ದ ವಿಟ್ಲ ನಿವಾಸಿ ಧನುಷ್(25) ಹಾಗೂ ಕನ್ಯಾನ ನಿವಾಸಿ ಧನುಷ್ (24) ಎಂಬಿಬ್ಬರು ಯುವಕರು ಮಾತ್ರ ನಾಪತ್ತೆಯಾಗಿದ್ದಾರೆ. ಇವರಿಬ್ಬರೂ ಸೋದರ ಸಂಬಂಧಿಗಳಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಪ್ರಕರಣಕ್ಕೆ ಬಿಗ್ ಟ್ವಿಸ್ಟ್:

ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದ್ದು, ಅಪಘಾತ ವಾಗಿ ಕಾರು ಹೊಳೆಯ ಪಾಲಾದ ಬಳಿಕವೂ ಯುವಕರಿಬ್ಬರು ತಮ್ನ ಮೊಬೈಲ್ ಫೋನ್ ಬಳಸಿರೋದು ಪತ್ತೆಯಾಗಿದೆ.  ಆದರೆ ಹೊಳೆಯಿಡೀ ಜಾಲಾಡಿದರೂ ಯುವಕರ ಪತ್ತೆಯಿಲ್ಲ‌. ಅಪಘಾತದ ಬಳಿಕ ತಮ್ಮ ಕಾರಿಗೆ ಲಾರಿ ಢಿಕ್ಕಿ ಹೊಡೆದಿದೆ ಎಂದಷ್ಟೇ ಅವರು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದೇ ನಂಬರ್ ಅನ್ನು ಪೊಲೀಸರು ಟ್ರೇಸ್ ಮಾಡಿ ಲೊಕೇಶನ್ ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ. ಇವರಿಬ್ಬರೂ ಎಲ್ಲೋ ಅಡಗಿಕೊಂಡು ಕುಳಿತಿದ್ದಾರೆ ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. 

ಅಪಘಾತದ ವೇಳೆ ಇವರು ಕಾರಿನಲ್ಲಿದ್ದರೇ ಅಥವಾ ತಪ್ಪಿಸಿಕೊಂಡು ಪಾರಾಗಿದ್ದಾರೆಯೇ ಎಂಬುದು ಯುವಕರು ಸಿಕ್ಕ ಬಳಿಕವೇ ಗೊತ್ತಾಗಬೇಕಿದೆ. ಇಬ್ಬರೂ ಭಯದಿಂದ ಎಲ್ಲೋ ಅಡಗಿಕೊಂಡಿರಬಹುದು ಎಂದೂ ಹೇಳಲಾಗುತ್ತಿದ್ದು, ಸದ್ಯ ನಂಬರ್ ಟ್ರೇಸ್ ಮಾಡಿರುವ ಪೊಲೀಸರಿಗೆ ಸ್ಥಳದ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ತನಿಖೆ ಚುರುಕುಗೊಂಡಿದೆ.

Ads on article

Advertise in articles 1

advertising articles 2

Advertise under the article