ಮಂಗಳೂರು: ಟ್ರುಥ್ ಆ್ಯಂಡ್ ಡೇರ್ ಗೇಮ್ ಗಾಗಿ ಕಾಲೇಜು ವಿದ್ಯಾರ್ಥಿಗಳಿಂದ 'ಕಿಸ್ಸಿಂಗ್': ಪೊಲೀಸ್ ಕಮಿಷನರ್
Thursday, July 21, 2022
ಮಂಗಳೂರು: ಕಾಲೇಜು ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್ ನಲ್ಲಿ ನಿರತರಾಗಿರುವ ವೀಡಿಯೋವೊಂದು ಇಂದು ವೈರಲ್ ಆಗಿ ಭಾರೀ ಸಂಚಲ ಸೃಷ್ಟಿಸುತ್ತಿದೆ. ಸುಮಾರು 7-8 ವಿದ್ಯಾರ್ಥಿಗಳ ಗುಂಪೊಂದು ಮೋಜು - ಮಸ್ತಿಯಲ್ಲಿ ನಿರತಾಗಿದ್ದು, ಇವರೆಲ್ಲರೂ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಈ ಬಗ್ಗೆ ಕಾಲೇಜಿಗೆ ತೆರಳಿ ಪರಿಶೀಲನೆ ನಡೆಸಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಬಳಿಕ ಮಾತನಾಡಿ, ಈ ಕಿಸ್ಸಿಂಗ್ ಪ್ರಕರಣವು ಟ್ರುಥ್ ಆ್ಯಂಡ್ ಡೇರ್ ಗೇಮ್ ಹಿನ್ನೆಲೆಯಲ್ಲಿ ನಡೆದಿದೆ. ಆದರೆ ಇದರ ವೀಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿದೆ. ಸದ್ಯ ಕಿಸ್ಸಿಂಗ್ ವೀಡಿಯೋ ವೈರಲ್ ಮಾಡಿರುವ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.
ಈವರೆಗೆ ಕಿಸ್ಸಿಂಗ್ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆಯು ನಾಲ್ಕೈದು ತಿಂಗಳ ಹಿಂದೆ ನಡೆದಿದೆ. ಆದರೆ ಕಿಸ್ಸಿಂಗ್ ದೃಶ್ಯವನ್ನು ಚಿತ್ರೀಕರಿಸಿರುವ ವಿದ್ಯಾರ್ಥಿ ಆ ವೀಡಿಯೋವನ್ನು ಒಂದು ವಾರದ ಹಿಂದೆ ಕಾಲೇಜು ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾನೆ. ತಕ್ಷಣ ಎಚ್ಚೆತ್ತ ಪ್ರಾಧ್ಯಾಪಕರು ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಪ್ರಾಂಶುಪಾಲರು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ 8 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ ಎಂದು ತನಿಖೆಯ ಸಂದರ್ಭ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ಹೇಳಿದರು.
ಈ ಕಿಸ್ಸಿಂಗ್ ಪ್ರಕರಣವು ಕಾಲೇಜು ಸಮೀಪದಲ್ಲಿಯೇ ಇರುವ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ. ಈ ಅಪಾರ್ಟ್‌ಮೆಂಟ್ ನಲ್ಲಿ ಕಿಸ್ಸಿಂಗ್ ಪ್ರಕರಣದಲ್ಲಿ ನಿರತರಾದ ವಿದ್ಯಾರ್ಥಿಗಳಿಬ್ಬರು ವಾಸ್ತವ್ಯವಿದ್ದರು. ಆದರೆ ಅಪಾರ್ಟ್‌ಮೆಂಟ್ ಮಾಲಕರು ಈ ವಿದ್ಯಾರ್ಥಿಗಳು ಮದ್ಯಪಾನ ಮಾಡುವ ಹಿನ್ನೆಲೆಯಲ್ಲಿ ರೂಂ ಬಿಡಿಸಿದ್ದಾರೆಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಕೃತ್ಯದ ವಿಚಾರದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿದ್ಯಾರ್ಥಿನಿಯರು ಅಪ್ರಾಪ್ತರೇ ಎಂದು ಪರಿಶೀಲನೆ ನಡೆಸಿ ಪೊಕ್ಸೊ ಪ್ರಕರಣ ದಾಖಲು ಮಾಡುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.