ಕಾಸರಗೋಡು: ತೆಂಗಿನಮರ ಮೈಮೇಲೆಯೇ ಮುರಿದುಬಿದ್ದು ಬಾಲಕ ಮೃತ್ಯು
Saturday, July 16, 2022
ಕಾಸರಗೋಡು: ಭಾರೀ ಸುಂಟರಗಾಳಿ ಪರಿಣಾಮ ತೆಂಗಿನಮರ ಮೈಮೇಲೆಯೇ ಮುರಿದುಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೋರ್ವನು ಮೃತಪಟ್ಟ ದುರ್ಘಟನೆಯೊಂದು ಕಾಸರಗೋಡು ಜಿಲ್ಲೆಯ ಕಯ್ಯಾರದಲ್ಲಿ ನಡೆದಿದೆ.
ವಾರ್ತಾಭಾರತಿ ಪತ್ರಿಕೆ, ಡೈಜಿವರ್ಲ್ಡ್ ಚ್ಯಾನೆಲ್ ನ ಕಾಸರಗೋಡು ವರದಿಗಾರ, ಕಯ್ಯಾರ ನಿವಾಸಿ ಸ್ಟೀಫನ್ ಕ್ರಾಸ್ತಾ ಅವರ ಪುತ್ರ ಸೋನು ಕ್ರಾಸ್ತ(13) ಮೃತಪಟ್ಟ ಬಾಲಕ.
8ನೇ ತರಗತಿಯ ವಿದ್ಯಾರ್ಥಿ ಸೋನು ಕ್ರಾಸ್ತ ಇಂದು ಮಧ್ಯಾಹ್ನ ಮನೆಯ ಬಳಿಯ ತೋಟದಲ್ಲಿದ್ದ ಸಂದರ್ಭ ಸುಂಟರಗಾಳಿಗೆ ಸಿಲುಕಿದ ತೆಂಗಿನಮರವೊಂದು ಮುರಿದು ಬಿದ್ದು ಆತನ ಮೇಲೆಯೇ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.