
ಬೆಳ್ತಂಗಡಿ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಯುವಕರ ತಂಡದಿಂದ ಹಲ್ಲೆ; ಗಲಾಟೆ ಬಿಡಿಸಲು ಬಂದವ ಮೃತ್ಯು
Saturday, July 23, 2022
ಲೈಂಗಿಕ ಕಿರುಕುಳದ ಆರೋಪಿ ನಾರಾಯಣ ನಾಯ್ಕ್
ಬೆಳ್ತಂಗಡಿ: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕರ ಗುಂಪೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಗಲಾಟೆ ಬಿಡಿಸಲು ಬಂದ ವ್ಯಕ್ತಿಗೂ ಹಲ್ಲೆ ನಡೆದಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡ ಆತ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ (55) ಮೃತಪಟ್ಟ ದುರ್ದೈವಿ. ನಾರಾಯಣ ನಾಯ್ಕ (47) ಎಂಬಾತ ಸ್ಥಳೀಯ ಆರು ವರ್ಷದ ಬಾಲಕಿಗೆ ಕಳೆದ 10 ದಿನಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪ ಕೇಳಿ ಬಂದಿತ್ತು.
ಈ ವಿಚಾರವಾಗಿ ಅದಾಗಲೇ ರಾಜಿ ಪಂಚಾಯತಿಗೆ ನಡೆದು ಪ್ರಕರಣ ಅಂತ್ಯಗೊಂಡಿತ್ತು. ಆದರೆ ನಿನ್ನೆ ಸಂಜೆ ವೇಳೆ ಆತ ಮತ್ತೆ ಬಾಲಕಿಯನ್ನು ಕರೆದು ಮಾತಾಡಿಸಿದ್ದ ಎಂದು ಆರೋಪಿಸಲಾಗಿದೆ. ಪರಿಣಾಮ ಇದರ ಬಗ್ಗೆ ತಗಾದೆ ತೆಗೆದ ಯುವಕರ ತಂಡ ನಾರಾಯಣ ನಾಯ್ಕನನ್ನು ತಡೆದು ಹಲ್ಲೆಗೆ ಮುಂದಾಗಿದೆ. ಈ ವೇಳೆ ಜಾರಪ್ಪ ನಾಯ್ಕ ಹಲ್ಲೆ ನಡೆಸುವುದನ್ನು ತಡೆಯಲು ಬಂದಿದ್ದಾರೆ. ಆದ್ದರಿಂದ ಅವರ ಮೇಲೂ ಯುವಕರ ತಂಡ ಹಲ್ಲೆ ಮಾಡಿದೆ.
ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಜಾರಪ್ಪ ನಾಯ್ಕ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದೀಗ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ನಾರಾಯಣ ನಾಯ್ಕ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜಾರಪ್ಪ ನಾಯ್ಕ ಅವರ ಪುತ್ರ ರಾಜಶೇಖರ್ ದೂರು ನೀಡಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.