ಬಂಟ್ವಾಳ: ಶೆಡ್ ಮೇಲೆ ಗುಡ್ಡಕುಸಿತ; ಮೂವರು ಸಾವು, ಓರ್ವ ಗಂಭೀರ
Thursday, July 7, 2022
ಬಂಟ್ವಾಳ: ಶೆಡ್ ಒಂದರ ಮೇಲೆ ಗುಡ್ಡ ಕುಸಿದು ಕೇರಳ ಮೂಲದ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡು ಮೂವರು ಮೃತಪಟ್ಟು, ಗಂಭೀರವಾಗಿ ಗಾಯಗೊಂಡ ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಪಂಜಿಕಲ್ಲುವಿನ ಮುಕ್ಕುಡ ಎಂಬಲ್ಲಿ ನಡೆದಿದೆ.
ಏರಳ ರಾಜ್ಯದ ಪಾಲಕ್ಕಾಡು ನಿವಾಸಿ ಬಿಜು(46) ಮೃತಪಟ್ಟ ವ್ಯಕ್ತಿ. ಕೊಟ್ಟಾಯಂ ನಿವಾಸಿ ಬಾಬು(46), ಕಣ್ಣೂರು ನಿವಾಸಿ ಜಾನ್(44) ಹಾಗೂ ಅಲಫುಝಾ ನಿವಾಸಿ ಸಂತೋಷ್(46) ಮಣ್ಣಿನಡಿ ಸಿಲುಕಿ ಗಾಯಗೊಂಡವರು. ಇವರಲ್ಲಿ ಬಿಜು(46) ಎಂಬವರು ನಿನ್ನೆ ರಾತ್ರಿ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದಂತೆ ಸಂತೋಷ್, ಜಾನ್ ಹಾಗೂ ಬಾಬುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಲ್ಲಿ ಕೊನೆಯದಾಗಿ ರಕ್ಷಣೆಗೊಂಡ ಸಂತೋಷ್ ಹಾಗೂ ಬಾಬು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರಬ್ಬರ್ ತೋಟದಲ್ಲಿ ಕೆಲಸ ಮಾಡುವ ಐವರು ಈ ಶೆಡ್ ನಲ್ಲಿ ವಾಸವಾಗಿದ್ದರು. ಅವರಲ್ಲಿ ಓರ್ವ ಹೊರಗಡೆ ಇದ್ದು, ಉಳಿದ ನಾಲ್ವರು ಶೆಡ್ ಒಳಗಿದ್ದರು. ಸಂಜೆ ಏಳು ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಇವರ ಮನೆಯಿದ್ದ ಸಮೀಪದಲ್ಲಿದ್ದ ಗುಡ್ಡ ಕುಸಿದು ಬಂಡೆ ಕಲ್ಲುಗಳ ಸಹಿತ ಮನೆ ಮೇಲೆ ಬಿದ್ದಿದೆ. ಪರಿಣಾಮ ಒಳಗಿದ್ದ ಎಲ್ಲರೂ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಂದರ್ಭ ಮನೆಯಲ್ಲಿದ್ದ ಕಾರು ಜಖಂಗೊಂಡಿದೆ.
ಘಟನೆ ನಡೆದ ತಕ್ಷಣ ಮಾಹಿತಿ ಪಡೆದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಮಣ್ಣಿನಡಿಯಿಂದ ಮೇಲೆತ್ತಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಇವರಲ್ಲಿ ಮೂವರು ಮತ್ತೆ ಬದುಕಿ ಬರಲೇ ಇಲ್ಲ. ಉಳಿದಂತೆ ಕಣ್ಣೂರು ನಿವಾಸಿ ಜಾನ್ ಮಾತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.