Kadaba:-ಕಿಡ್ಸ್ ನೇತೃತ್ವದಲ್ಲಿ ಊರಿನ ದಾನಿಗಳ ಸಹಕಾರದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ..
Saturday, July 9, 2022
ಕೊಡಿಂಬಾಳ
ಕರ್ನಾಟಕ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಸೊಸೈಟಿ (ರಿ) ಪುತ್ತೂರು ಧರ್ಮಪ್ರಾಂತ್ಯದ ಅಧೀನದಲ್ಲಿರುವ ಕೊಡಿಂಬಾಳ ಕಿಡ್ಸ್ ಘಟಕದ ನೇತೃತ್ವದಲ್ಲಿ ಮತ್ತು ಊರಿನ ದಾನಿಗಳ ನೆರವಿನೊಂದಿಗೆ ಕೊಡಿಂಬಾಳ ಗ್ರಾಮದ ಪುಳಿಕುಕ್ಕು ಎಂಬಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಪ್ಲಾಸ್ಟಿಕ್ ಹಾಸಿದ ಗುಡಿಸಲಿನಲ್ಲಿ ವಾಸವಾಗಿದ್ದ ಪ್ರೇಮ ಎಂಬವರಿಗೆ ನಿರ್ಮಿಸಿ ಕೊಡಲಾದ ಮನೆಯ ಬೀಗದ ಕೀ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.
ಪುತ್ತೂರು ಕಿಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರೆ. ಫಾ. ಜಾನ್ ಕುನ್ನತ್ತೆತ್, ಕೊಡಿಂಬಾಳ ಕಿಡ್ಸ್ ಘಟಕದ ನಿರ್ದೇಶಕ ರೆ. ಫಾ ರಿನೋ, ಸ್ಥಳೀಯ ಪ್ರಮುಖರು ಮತ್ತು ಹಿರಿಯರಾದ ಪದ್ಮಯ್ಯ ಗೌಡ ಅವರು ಪ್ರೇಮ ಅವರಿಗೆ ಮನೆಯ ಬೀಗದ ಕೀಯನ್ನು ಹಸ್ತಾಂತರಿಸಿದರು. ಕೊಡಿಂಬಾಳ ಗ್ರಾಮದ ಪುಳಿಕುಕ್ಕು ಎಂಬಲ್ಲಿ ಪ್ರೇಮ ಎಂಬ ಈ ಮಹಿಳೆಯು ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಪ್ಲಾಸ್ಟಿಕ್ ಹಾಸಿದ ಕುಸಿದು ಹೋದ ಗುಡಿಸಲಿನಲ್ಲಿ ವಾಸವಾಗಿದ್ದರು. ಇವರ ಶೋಚನೀಯ ಸ್ಥಿತಿಯನ್ನು ಅರಿತ ಕೊಡಿಂಬಾಳ ಕಿಡ್ಸ್ ಘಟಕವು ಈ ವಿಚಾರವನ್ನು ಸ್ಥಳೀಯ ದಾನಿಗಳ ಗಮನಕ್ಕೆ ತಂದು ಅವರ ನೆರವಿನೊಂದಿಗೆ ಸಣ್ಣ ಮನೆಯೊಂದನ್ನು ನಿರ್ಮಿಸಿ ಕೊಡುವಲ್ಲಿ ಯಶಸ್ವಿಯಾಯಿತು. ಜಾತಿ, ಮತ, ವರ್ಣ ಭೇಧವಿಲ್ಲದೆ ಎಲ್ಲರೂ ಈ ಬಡ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಕೊಡಿಂಬಾಳ ಕಿಡ್ಸ್ ಅಧ್ಯಕ್ಷ ಜೋಸ್ ಪಿ.ಎಮ್, ಕೊಡಿಂಬಾಳ ಚರ್ಚ್ ಕಾರ್ಯದರ್ಶಿ ಸನಿಶ್ ಬಿ.ಟಿ, ಪ್ರಮುಖರಾದ ಅನ್ನಮ್ಮ, ರೂಪಾ ಸೇರಿದಂತೆ ಕಿಡ್ಸ್ ಕೊಡಿಂಬಾಳ ಘಟಕದ ಆಡಳಿತ ಮಂಡಳಿ ಸದಸ್ಯರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.