ಮಂಗಳೂರು: 'ಕಂಬಳ' ಸಿನಿಮಾದಲ್ಲಿ ನಟಿಸಲೊಪ್ಪದಿರುವುದೇ ಸುಳ್ಳು ಆಪಾದನೆಗೆ ಕಾರಣ: ಶ್ರೀನಿವಾಸ ಗೌಡ ಸ್ಪಷ್ಟನೆ
Saturday, July 23, 2022
ಮಂಗಳೂರು: ನಾನು ಕುಡುಬಿ ಸಮುದಾಯದವನಾಗಿದ್ದು, ಇದೇ ಕಾರಣದಿಂದ ತನ್ನನ್ನು ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರು ಕೀಳಾಗಿ ಕಾಣುತ್ತಿದ್ದರು. ಅಲ್ಲದೆ ಅವರು ನಿರ್ಮಿಸುವೆನೆಂದು ಹೇಳುತ್ತಿದ್ದ 'ಕಂಬಳ' ಸಿನಿಮಾದಲ್ಲಿ ನಟಿಸಲು ಒಪ್ಪದಿರುವುದೇ ಇದೀಗ ನನ್ನ ಮೇಲಿನ ಗುರುತರವಾದ ಆರೋಪಕ್ಕೆ ಕಾರಣ ಎಂದು ಕಂಬಳ ಓಟಗಾರ ಶ್ರೀನಿವಾಸ ಗೌಡ ತಮ್ಮ ಮೇಲಿನ ಆಪಾದನೆಗೆ ಸ್ಪಷ್ಟನೆ ನೀಡಿದ್ದಾರೆ.
ಕಂಬಳ ಓಟದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ 'ಉಸೇನ್ ಬೋಲ್ಟ್' ಜೊತೆಗೆ ತುಲನೆ ಮಾಡಿ ಶ್ರೀನಿವಾಸ ಗೌಡ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಕಂಬಳ ಸಮಿತಿಯ ಸದಸ್ಯ ಮುಚ್ಚೂರು ಕಲ್ಕುಡ ಶೆಟ್ಟಿಯವರು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಶ್ರೀನಿವಾಸ ಗೌಡ ಅವರು ನಾನು ಯಾವುದೇ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಲ್ಲ. ಯಾವುದೇ ತಪ್ಪೆಸಗಿಲ್ಲ. ಕಂಬಳದಲ್ಲಿ ಸಾಕಷ್ಟು ಮಂದಿ ಪ್ರಬುದ್ಧ ಓಟಗಾರರಿದ್ದಾರೆ. ಆದರೆ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರು ನನ್ನೊಬ್ಬನನ್ನೇ ಟಾರ್ಗೆಟ್ ಮಾಡಿ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರ ವ್ಯಕ್ತಿತ್ವದ ಬಗ್ಗೆ ನನಗೆ ಅಷ್ಟೊಂದು ಸರಿಯಾದ ಭಾವನೆ ಇಲ್ಲದ ಹಿನ್ನೆಲೆಯಲ್ಲಿ ನಾನು ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿರಲಿಲ್ಲ. ಇದೀಗ ನಾನು ಖ್ಯಾತ ನಿರ್ದೇಶಕ ರಾಜೇಂದ್ರ ಬಾಬು ಸಿಂಗ್ ಅವರ 'ಬಿರ್ದ್ ದ ಕಂಬಳ' ಸಿನಿಮಾದಲ್ಲಿ ನಟಿಸಲು ನಾನು ಒಪ್ಪಿದ್ದೇನೆ. ಇದೇ ಕಾರಣದಿಂದಲೇ ಅವರು ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸುತ್ತಿದ್ದಾರೆ. ಅಲ್ಲದೆ ನಾನು ಕಂಬಳ ಅಕಾಡೆಮಿಯ ಗುಣಪಾಲ ಕಡಂಬರ ಶಿಷ್ಯ ಎನ್ನುವ ಕಾರಣವೂ ಇದರ ಹಿಂದೆ ಅಡಗಿದೆ. ಆದ್ದರಿಂದ ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿರುವ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ಶ್ರೀನಿವಾಸ ಗೌಡ ಹೇಳಿದರು.