Mangaluru: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಸಂಪೂರ್ಣ ಯಾವಾಗ?; ಪೇಜಾವರ ಶ್ರೀಗಳು ನೀಡಿದ್ದಾರೆ ಸ್ಪಷ್ಟ ಉತ್ತರ
Monday, July 4, 2022
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯದ ಎಲ್ಲರಿಗೂ ಕುತೂಹಲವಿದೆ. ಈ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸ್ಪಷ್ಟ ಉತ್ತರ ನೀಡಿದ್ದಾರೆ.
ನಗರದ ಕದ್ರಿಯ ಮಂಜುಪ್ರಾಸಾದದಲ್ಲಿ ಪೇಜಾವರ ಮಠದ ಪಟ್ಟದ ಶ್ರೀರಾಮ ವಿಠ್ಠಲ ದೇವರ ತುಲಾಭಾರ ಸೇವೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯವು ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. 2024ರ ಮಕರ ಸಂಕ್ರಾಂತಿಯ ಉತ್ತರಾಯಣದ ಪರ್ವ ಕಾಲದಲ್ಲಿ ಮಂದಿರದಲ್ಲಿ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ ಎಂದು ಹೇಳಿದರು.
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಟ್ರಸ್ಟ್ ನ ಮೂಲ ಉದ್ದೇಶ ಶ್ರೀರಾಮಮಂದಿರದ ನಿರ್ಮಾಣವೇ ಆಗಿದೆ. ಆದರೆ ಆ ಬಳಿಕ ನಾವು ಸಮಾಜಮುಖಿ ಯೋಜನೆಗಳನ್ನು ಟ್ರಸ್ಟ್ ಮುಂಭಾಗ ಇಟ್ಟಿದ್ದೇವೆ. ಶ್ರೀರಾಮನ ಹೆಸರಿನಲ್ಲಿ ಗ್ರಾಮಗಳನ್ನು ದತ್ತು ತೆಗೆದುಕೊಂಡು ರಾಮರಾಜ್ಯವನ್ನು ನಿರ್ಮಾಣ ಮಾಡುವ ಸಂಕಲ್ಪ ನಮ್ಮ ಮುಂದಿದೆ ಎಂದು ಹೇಳಿದರು.
ಶ್ರೀರಾಮಮಂದಿರ ನಿರ್ಮಾಣದ ಸ್ಥಳವು ಸಂಪೂರ್ಣ ಧೂಳು ಮಿಶ್ರಿತ ಮರಳನ್ನು ಪ್ರದೇಶವಾಗಿದೆ. ಆ ಮರಳನ್ನು 40 ಅಡಿ ಆಳದವರೆಗೆ ಸಂಪೂರ್ಣ ಹೊರ ತೆಗೆದು ಅಡಿಪಾಯವನ್ನು ಗಟ್ಟಿಗೊಳಿಸುವ ಕಾರ್ಯ ಆಗಿದೆ. ಅದರ ಮೇಲೆ ಪೀಠ ಸ್ಥಾಪನಾ ಕಾರ್ಯ ಉತ್ತರ ಪ್ರದೇಶದ ಪಿಎಂ ಯೋಗಿ ಆದಿತ್ಯನಾಥರಿಂದ ನಡೆದಿದೆ. ಮಂದಿರ ನಿರ್ಮಾಣದ ಕಾರ್ಯವಷ್ಟಲ್ಲದೆ ರಾಮರಾಜ್ಯದ ನಿರ್ಮಾಣವೂ ನಮ್ಮ ಕನಸಾಗಿದೆ ಎಂದರು.
ಪ್ರಜಾರಾಜ್ಯದ ಈ ಕಾಲದಲ್ಲಿ ರಾಮರಾಜ್ಯ ಆಗಬೇಕಾದಲ್ಲಿ ಪ್ರಜೆಗಳೆಲ್ಲರೂ ರಾಮರಾಗಬೇಕಾಗುತ್ತದೆ. ರಾಮನ ಆರಾಧಕರಾದ ನಾವು ರಾಮನಿಗೆ ತಲೆ ಬಾಗುವುದೆಂದರೆ ಸದ್ಗುಣಗಳಿಗೆ ತಲೆಬಾಗುವುದು ಎಂದರ್ಥ. ಮಾತೃಭೂಮಿ, ತಾಯಿ, ರಾಷ್ಟ್ರದ ಬಗ್ಗೆ ಎಷ್ಟು ಗೌರವ ಇರಬೇಕು ಎಂಬುದನ್ನು ಶ್ರೀರಾಮಚಂದ್ರ ತೋರಿಸಿಕೊಟ್ಟಿದ್ದಾನೆ. ಅವನ್ನು ನಾವು ಪಾಲಿಸಬೇಕಾಗಿದೆ. ಈ ಮೂಲಕ ರಾಮರಾಜ್ಯದ ಕನಸು ಕೈಗೂಡಲು ಸಾಧ್ಯ. ಆದ್ದರಿಂದ ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ಪಕ್ಷಾತೀತವಾಗಿ ಎಲ್ಲರೂ ಈ ಕಾರ್ಯವನ್ನು ಮಾಡಬೇಕು. ನಾಗರಿಕ ಸಮಾಜದಲ್ಲಿ ಕೆಲವು ಮಂದಿ ಅನಾಗರಿಕರು ಇರುತ್ತಾರೆ. ಅವರನ್ನು ಮಟ್ಟ ಹಾಕುವುದು ಸರಕಾರದ ಕೆಲಸ. ಅದನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.