Mangaluru: ಕುಡ್ಲಕ್ಕೆ ಬಂದ ಫೆಮಿನಾ ಮಿಸ್ ಇಂಡಿಯಾ ಚೆಲುವೆ ಸಿನಿ ಶೆಟ್ಟಿ
Monday, July 18, 2022
ಮಂಗಳೂರು: ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿದ ಬಳಿಕ ಸಿನಿ ಶೆಟ್ಟಿ ಇಂದು ಮೊದಲ ಬಾರಿಗೆ ಕುಡ್ಲಕ್ಕೆ ಆಗಮಿಸಿದ್ದಾರೆ. ತಮ್ಮ ತವರು ಜಿಲ್ಲೆ ಉಡುಪಿಗೆ ಆಗಮಿಸಿರುವ ಅವರು ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಹೆತ್ತವರೊಂದಿಗೆ ಆಗಮಿಸಿದ ಸಿನಿ ಶೆಟ್ಟಿಯನ್ನು ಅವರ ಕುಟುಂಬ ವರ್ಗ ತುಂಬು ಸಂತಸದಿಂದ ಸ್ವಾಗತಿಸಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಾಜಿ, ಗುಲಾಬಿ ಹೂವಿನ ಹರಿವಾಣದಲ್ಲಿ ಆರತಿ ಎತ್ತಿ ಸಿನಿ ಶೆಟ್ಟಿಗೆ ಅವರ ಅಜ್ಜಿ ಸ್ವಾಗತಿಸಿದರು. ಈ ವೇಳೆ ಸುಮಾರು 2 ಗಂಟೆಗಳಿಂದ ಅವರ ಬರುವಿಕೆಗೆ ಕಾದಿದ್ದ ಕುಟುಂಬ
ವರ್ಗ ಹೂಮಾಲೆ, ಹೂಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲದೆ ಫೋಟೋ, ಸೆಲ್ಫಿ ತೆಗೆದು ಸಂಭ್ರಮಪಟ್ಟರು.
ಮಂಗಳೂರು ವಿಮಾನ ನಿಲ್ದಾಣದಿಂದ ಹೊರ ಬಂದಾಗ ಸಿನಿ ಶೆಟ್ಟಿ ಅಪ್ಪಟ ಭಾರತೀಯ ನಾರಿಯಂತೆ ಲಕ್ಷ್ಮಿ ಚಿತ್ರಿಕೆಯಿರುವ ಮೂರು ಜುಮುಕಿಯ ಬೆಂಡೋಲೆ, ಕೈಗೆ ಲಕ್ಷ್ಮಿ ಖಚಿತ ಬಳೆ, ಚಿನ್ನದ ಹೊಂಬಣ್ಣದ ಮೆರೂನ್ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಅಲ್ಲದೆ ಅಪ್ಪಟ ಉಡುಪಿ ಶೈಲಿಯ ತುಳುವಿನಲ್ಲಿ ಮಾತನಾಡಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಿನಿ ಶೆಟ್ಟಿ, ಮುಂದಕ್ಕೆ ಮಿಸ್ ವರ್ಲ್ಡ್ ಆಗುವ ಗುರಿ ಇದೆ. ಅದಕ್ಕೆ ತಯಾರಿ ನಡೆಸುತ್ತಿದ್ದೇನೆ. ಉತ್ತಮ ಕಥೆ, ಸ್ಕ್ರಿಪ್ಟ್ ದೊರಕಿದ್ದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅಭಿಲಾಷೆ ಹೊಂದಿದ್ದೇನೆ. ನಾನು ಇನ್ನೂ ವಿದ್ಯಾರ್ಥಿನಿ. ಮೊದಲಾಗಿ ನಾನು ನನ್ನ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಬೇಕು ಎಂದು ಹೇಳಿದರು.
ನನ್ನ ಹೆತ್ತವರ ಊರು ಉಡುಪಿ. ನನ್ನ ರಜಾದಿನಗಳನ್ನು ಉಡುಪಿಯ ಅಜ್ಜಿ ಮನೆಯಲ್ಲಿ ಕಳೆದಿದ್ದೆ. ಈ ಸಂದರ್ಭ ಮತ್ತೆ ಅಲ್ಲಿಗೆ ಬರುತ್ತಿರುವುದರಿಂದ ಸಂತಸಗೊಂಡಿದ್ದೇನೆ. ಸದ್ಯ ಮಾಡೆಲ್ ಆಗುವ ಉದ್ದೇಶವಿಲ್ಲ. ಐದು ವರ್ಷಗಳ ಕಾಲ ಫೈನಾನ್ಸಿಯಲ್ ಕ್ಷೇತ್ರದಲ್ಲಿ ದುಡಿಯುವ ಆಸಕ್ತಿ ಹೊಂದಿದ್ದೇನೆ. ಆ ಬಳಿಕ ಒಳ್ಳೆಯ ಅವಕಾಶ ಸಿಕ್ಕಲ್ಲಿ ಮಾಡೆಲ್ ಆಗುವ ಬಗ್ಗೆ ಯೋಚಿಸುತ್ತೇನೆ ಎಂದು ಸಿನಿ ಶೆಟ್ಟಿ ಹೇಳಿದರು.