ಮಂಗಳೂರು: ಮರುಳುಗಾರಿಕಾ ದೋಣಿ ಮಗುಚಿ ನೀರಿನಲ್ಲಿ ಕೊಚ್ಚಿಹೋಗಿ ಕಾರ್ಮಿಕ ನಾಪತ್ತೆ!
Saturday, July 2, 2022
ಮಂಗಳೂರು: ನಗರದ ಅರ್ಕುಳ ಗ್ರಾಮದ ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ದೋಣಿ ಮಗುಚಿಬಿದ್ದ ಪರಿಣಾಮ ಉತ್ತರಪ್ರದೇಶ ಮೂಲದ ಕಾರ್ಮಿಕನೋರ್ವನು ನಾಪತ್ತೆಯಾಗಿರುವ ಘಟನೆ ನಡೆದಿದೆ. ದೋಣಿಯಲ್ಲಿದ್ದ ಮತ್ತಿಬ್ಬರು ಕಾರ್ಮಿಕರು ಈಜಿ ದಡ ಸೇರಿ ಪಾರಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ರಾಜು ಸಾಹ್ ನಾಪತ್ತೆಯಾದ ಕಾರ್ಮಿಕ.
ಅರ್ಕುಳ ಗ್ರಾಮದ ನೇತ್ರಾವತಿ ನದಿಯಲ್ಲಿನ ಶಶಿರಾಜ್ ಎಂಬವರ ಧಕ್ಕೆಯಲ್ಲಿ ಈ ಹಿಂದೆ ಇವರು ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದರು. ಆದರೆ ವಿಪರೀತ ಮಳೆಯ ಪರಿಣಾಮ ನೇತ್ರಾವತಿ ನದಿ ತುಂಬಿ ಹರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮೂಲದ ರಾಜು ಸಾಹ್, ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಎಂಬವರು ಮರಳುಗಾರಿಕಾ ದೋಣಿಯನ್ನು ದಡಕ್ಕೆ ತರುತ್ತಿದ್ದರು.
ಈ ವೇಳೆ ನೇತ್ರಾವತಿ ನದಿಯ ನೀರಿನ ರಭಸ ಹೆಚ್ಚಾಗಿ ದೋಣಿ ಸಹಿತ ಮೂವರೂ ಕೊಚ್ಚಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಅಡ್ಯಾರ್ - ಪಾವೂರು ಸೇತುವೆಯಡಿಯಲ್ಲಿ ಸಿಲುಕಿ ಈಜಿ ದಡ ಸೇರಿ ಪಾರಾಗಿದ್ದಾರೆ. ಆದರೆ ರಾಜು ಸಾಹ್ ಮಾತ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತನ ಶೋಧ ಕಾರ್ಯ ನಡೆಯುತ್ತಿದೆ.