ಬಿ.ಟಿ.ಲಲಿತಾ ನಾಯಕ್ ಮನೆಗೆ ಮತ್ತೆ ಕೊಲೆ ಬೆದರಿಕೆ ಪತ್ರ ಪೋಸ್ಟ್: ತಿಂಗಳಲ್ಲಿ ಮೂರನೇ ಪತ್ರ ರವಾನೆ
Sunday, July 17, 2022
ಬೆಂಗಳೂರು: ಪ್ರಗತಿಪರ ಚಿಂತಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮನೆಗೆ ಮತ್ತೊಂದು ಕೊಲೆ ಬೆದರಿಕೆ ಪತ್ರ ಪೋಸ್ಟ್ ಆಗಿದೆ. ಈ ಮೂಲಕ ಅವರಿಗೆ ಈ ತಿಂಗಳಲ್ಲಿ ಮೂರನೇ ಕೊಲೆ ಬೆದರಿಕೆ ಪತ್ರ ರವಾನೆಯಾದಂತಾಗಿದೆ.
ದುಷ್ಕರ್ಮಿಗಳು ಈ ಬೆದರಿಕೆ ಪತ್ರದಲ್ಲಿ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಸಾಹಿತಿಗಳಾದ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಡಿಕೆಶಿ, ಸೇರಿದಂತೆ ಕಪಿಲ್ ಸಿಬಾಲ್, ಲೀನಾ ಮಣಿಮೇಖಲೈ, ಮೆಹುವಾ ಮೊಯಿತ್ರಾ ಇವರ ಫೋಟೋಗಳನ್ನು ಅಳವಡಿಸಿ ಕೊಲೆ ಬೆದರಿಕೆಯನ್ನೊಡ್ಡಲಾಗಿದೆ. ಅಷ್ಟೇ ಅಲ್ಲದೆ ಇನ್ನೂ ಕೆಲವರ ಫೋಟೋ ಸಿಕ್ಕಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇವರುಗಳು ಅಪ್ಪಟ ದೇಶದ್ರೋಹಿಗಳು. ದೇಶದ ಸೈನಿಕರು, ಪೊಲೀಸರು ಹಾಗೂ ನಾಗರಿಕರ ಮೇಲೆ ಇಸ್ಲಾಮಿಕ್ ಮತಾಂಧರು, ಭಯೋತ್ಪಾದಕರು ದಾಳಿ ಮಾಡಿದಾಗ ತುಟಿ ಬಿಚ್ಚೋಲ್ಲ. ಪಠ್ಯಪುಸ್ತಕದಲ್ಲಿ ದೇಶಪ್ರೇಮ, ನಾಡಭಕ್ತಿಯನ್ನು ಬಿಂಬಿಸಿದರೆ ಉರಿದು ಬೀಳುತ್ತಾರೆ. ಆದ್ದರಿಂದ ಇಂತಹ ದುರುಳರು, ದುರ್ಬುದ್ಧಿಯುಳ್ಳವರು ಮುಂದಿನ ದಿನಗಳಲ್ಲಿ ದುರ್ಮರಣಕ್ಕೀಡಾಗುತ್ತಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪತ್ರವು ಜುಲೈ16ರ ಸಂಜೆ ಬಿಟಿ ಲಲಿತಾ ನಾಯಕ್ ಮನೆಗೆ ರವಾನೆಯಾಗಿದೆ. ಅದೇ ರೀತಿ ಇದೇ ತಿಂಗಳ 3 ಹಾಗೂ 7 ನೇ ತಾರೀಕಿಗೂ ಇದೇ ರೀತಿ ಕೊಲೆ ಬೆದರಿಕೆ ಪತ್ರ ರವಾನೆಯಾಗಿದೆ. ಆದರೆ ಈವರೆಗೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸರಕಾರ ವಿಫಲವಾಗಿದೆ ಎಂದು ಬಿ.ಟಿ.ಲಲಿತಾ ನಾಯಕ್ ಅಸಮಾಧಾನ ಹೊರಹಾಕಿದ್ದಾರೆ.