![ಕ್ರಿಕೆಟ್ ಬೆಟ್ಟಿಂಗ್ ನಿಂದ ದಂಪತಿ ನಡುವೆ ಕಲಹ: ಪತಿಯೇ ಪತ್ನಿಯ ಕೊಲೆಗೈದನೇ? ಕ್ರಿಕೆಟ್ ಬೆಟ್ಟಿಂಗ್ ನಿಂದ ದಂಪತಿ ನಡುವೆ ಕಲಹ: ಪತಿಯೇ ಪತ್ನಿಯ ಕೊಲೆಗೈದನೇ?](https://blogger.googleusercontent.com/img/b/R29vZ2xl/AVvXsEiI8myUCmMY9kKepI4gaEUPjD0FwTTZY2arNhIsPLJrIidosPoxFDVnntOiOpyu7SYO5KwPpGCTyjZtm35WVNTKJD1n2R5RgkVqMxJfa4-ZGC6FgQC64H-q-L_yzF-NN7X9CQvsdUTFgmrC/s1600/1656954387866074-0.png)
ಕ್ರಿಕೆಟ್ ಬೆಟ್ಟಿಂಗ್ ನಿಂದ ದಂಪತಿ ನಡುವೆ ಕಲಹ: ಪತಿಯೇ ಪತ್ನಿಯ ಕೊಲೆಗೈದನೇ?
Monday, July 4, 2022
ಹಾಸನ: ಮಹಿಳೆಯೋರ್ವರು ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಪತಿಯೇ ಕೊಲೆಗೈದಿರುವ ಆರೋಪ ಕೇಳಿ ಬಂದಿದೆ. ಪತಿಯ ಕ್ರಿಕೆಟ್ ಬೆಟ್ಟಿಂಗ್ ಹುಚ್ಚಾಟದಿಂದ ದಂಪತಿ ಮಧ್ಯೆ ಕಲಹವೇರ್ಪಟ್ಟಿತ್ತು. ಇದೇ ಕಾರಣದಿಂದ ಇದೀಗ ಪತಿಯೇ ಪತ್ನಿಯ ಕೊಲೆಗೈದಿದ್ದಾನೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.
ಹಾಸನ ತಾಲೂಕಿನ ದೊಡ್ಡಮಂಡಿಗನ ಹಳ್ಳಿ ಗ್ರಾಮದ ನಿವಾಸಿ ತೇಜಸ್ವಿನಿ(28) ಮೃತಪಟ್ಟ ಮಹಿಳೆ. ನಿನ್ನೆ ತೇಜಸ್ವಿಯವರ ಮೃತದೇಹವು ಆಕೆಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಸಾವಿಗೆ ಪತಿ ಮಧುವೇ ಕಾರಣ ಎಂದು ಆಕೆಯ ಕುಟುಂಬದವರು ಆತನ ಮನೆಯ ಮುಂದೆ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಮಧು ಕೆಲಸ ಮಾಡಿಕೊಂಡಿದ್ದ. ಈತ ಕ್ರಿಕೆಟ್ ಬೆಟ್ಟಿಂಗ್ ವ್ಯಸನಿಯಾಗಿದ್ದ. ಅದಕ್ಕಾಗಿಯೇ ಆತ 20ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರದಲ್ಲಿ ಪತ್ನಿ ಪ್ರಶ್ನೆ ಮಾಡಿರುವ ಕಾರಣಕ್ಕೆ ದಂಪತಿ ಮಧ್ಯೆ ಕಲಹವೇರ್ಪಟ್ಟಿತ್ತು. ಈ ಕಾರಣದಿಂದ ಸಿಟ್ಟಿಗೆದ್ದ ಪತಿ ಮಧು ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.