ಬಿ.ಸಿ.ರೋಡು: ಕ್ಷುಲ್ಲಕ ವಿಚಾರಕ್ಕೆ ಚೂರಿಯಿಂದ ಇರಿದು ಯುವಕನ ಕೊಲೆ
Tuesday, July 5, 2022
ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಚೂರಿಯಿಂದ ಇರಿದು ಯುವಕನನ್ನು ಕೊಲೆಗೈದಿರುವ ಘಟನೆ ಬಿ.ಸಿ.ರೋಡು ಸಮೀಪದ ಪೊನ್ನೋಡಿ ಎಂಬಲ್ಲಿನ ಕೆಎಸ್ಆರ್ ಟಿಸಿ ಬಸ್ ಡಿಪೋ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಬಿ.ಸಿ.ರೋಡು ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಸೀಫ್(32) ಹತ್ಯೆಯಾದ ಯುವಕ. ಮಾರಿಪಳ್ಳ ನಿವಾಸಿಗಳಾದ ನೌಫಾಲ್ ಹಾಗೂ ನೌಶೀರ್ ಕೊಲೆ ಆರೋಪಿಗಳು ಎಂದು ಹೇಳಲಾಗುತ್ತಿದೆ.
ಕೆಎಸ್ಆರ್ ಟಿಸಿ ಬಸ್ ಡಿಪೋ ಬಳಕ ಇರುವ ಹೊಟೇಲ್ ಮುಂಭಾಗ ಬೈಕ್ ನಲ್ಲಿ ಬಂದ ಆಸೀಫ್ ಹಾರ್ನ್ ಹಾಕಿದ್ದಾನೆ. ಈ ವಿಚಾರವಾಗಿ ನೌಫಾಲ್ ಹಾಗೂ ನೌಶೀರ್ ಎಂಬವರು ತಗಾದೆ ತೆಗೆದಿದ್ದಾರೆ. ಈ ಸಂದರ್ಭ ಮೂವರ ನಡುವೆ ಮಾತಿಗೆ ಮಾತು ಬೆಳೆದಿದೆ. ಆ ಬಳಿಕ ಆಸೀಫ್ ಸ್ಥಳಕ್ಕೆ ತನ್ನ ಸ್ನೇಹಿತರನ್ನು ಕರೆಸಿದ್ದಾನೆ. ಆಗ ಮತ್ತೆ ಇತ್ತಂಡದವರಿಂದ ವಾಗ್ವಾದ ಬೆಳೆದಿದೆ.
ಪರಿಣಾಮ ಕುಪಿತಗೊಂಡ ನೌಫಾಲ್ ಹಾಗೂ ನೌಶೀರ್ ಇಬ್ಬರೂ ಸೇರಿ ಆಸೀಫ್ ಗೆ ಚೂರಿಯಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಆಸೀಫ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಠಾಣಾ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಈ ನಡುವೆ ನೌಫಾಲ್ ಹಾಗೂ ನೌಶೀರ್ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸೀಫ್ ನ ತಂಡ ಹಲ್ಲೆಗೈದಿದೆ ಎಂದು ದೂರಲಾಗಿದೆ.