ಮಾಲಕಿಯನ್ನೇ ಕಚ್ಚಿ ಭೀಕರವಾಗಿ ಕೊಂದು ಹಾಕಿರುವ ಶ್ವಾನವನ್ನು ದತ್ತು ಪಡೆಯಲು ಜನರು ಉತ್ಸುಕರಾಗಿದ್ದೇಕೆ?
Tuesday, July 26, 2022
ಲಖನೌ: ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಲಖನೌದಲ್ಲಿ ತನ್ನ ಮಾಲಕಿ 82 ವರ್ಷದ ವೃದ್ಧೆಯನ್ನು ಕಚ್ಚಿ ಕಚ್ಚಿ ಭೀಕರವಾಗಿ ಕೊಂದ ಹಾಕಿರುವ ಪಿಟ್ ಬುಲ್ ಶ್ವಾನವನ್ನು ದತ್ತು ಪಡೆಯಲು ಬಹಳಷ್ಟು ಮಂದಿ ಉತ್ಸಾಹ ವ್ಯಕ್ತಪಡಿಸಿರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ.
ಸುಮಾರು ಆರಕ್ಕೂ ಮಂದಿ ಹಾಗೂ ಎನ್ ಜಿಒಗಳು ದತ್ತು ಪಡೆಯುವ ಬಗ್ಗೆ ಲಖನೌ ಮನಪಾವನ್ನು ಸಂಪರ್ಕಿಸಿ ಈ ಶ್ವಾನವನ್ನು ದತ್ತು ಪಡೆಯುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರಂತೆ. ಈ ಪಿಟ್ ಬುಲ್ ಶ್ವಾನವು ಅಷ್ಟೊಂದು ಭೀಕರವಾಗಿ ಮಾಲಕಿಯನ್ನು ಕಚ್ಚಿ ಕಚ್ಚಿ ಕೊಂದರೂ, ಅದನ್ನು ದತ್ತು ಪಡೆಯಲು ಯಾಕೆ ಅಷ್ಟೊಂದು ಉತ್ಸಾಹ ತೋರುತ್ತಿದ್ದಾರೆ ಎಂಬುದು ಅನೇಕರಿಗೆ ಅಚ್ಚರಿಯ ಸಂಗತಿಯಾಗಿದೆ.
ಇಲ್ಲಿನ ಕೈಸರ್‌ಬಾಫ್ ಎಂಬಲ್ಲಿನ ಸುಶೀಲಾ ತ್ರಿಪಾಠಿ ಎಂಬವರು ತಮ್ಮ 35 ವರ್ಷದ ಪುತ್ರ ಅಮಿತ್ ತ್ರಿಪಾಠಿಯೊಂದಿಗೆ ವಾಸವಿದ್ದರು. ಅಮಿತ್ ತ್ರಿಪಾಠಿ, ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜುಲೈ 12ರಂದು ಅವರ ಸಾಕು ನಾಯಿ ಪಿಟ್ ಬುಲ್ ಸುಶೀಲಾ ತ್ರಿಪಾಠಿ ಮೇಲೆ ದಾಳಿ ಮಾಡಿ ಭೀಕರವಾಗಿ ಕೊಂದು ಹಾಕಿತ್ತು. ಮೂರು ವರ್ಷಗಳ ಹಿಂದಷ್ಟೇ ತೆಗೆದುಕೊಂಡು ಸಾಕಿಕೊಂಡಿದ್ದ ಈ ನಾಯಿ ಮಾಲಕಿಯನ್ನೇ ಭೀಲರ ಕೊಂದು ಹಾಕಿತ್ತು.
ದಾಳಿಯ ಬಳಿಕ ದೆಹಲಿಯ ಮನಪಾ ಈ ದಾಳಿಕೋರ ಶ್ವಾನವನ್ನು ನಗರ್ ನಿಗಮ್‌ನಲ್ಲಿರುವ ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿತ್ತು. ಈ ಶ್ವಾನವನ್ನು ನೋಡಿಕೊಳ್ಳಲೆಂದೇ ನಾಲ್ಕು ಮಂದಿಯನ್ನು ನೇಮಿಸಲಾಗಿತ್ತು. ಇದೀಗ ಅಧಿಕಾರಿಗಳ ಪ್ರಕಾರ ಅರ್ಧ ಡಜನ್‌ಗೂ ಅಧಿಕ ಮಂದಿ ಮತ್ತು ಎನ್ ಜಿಒಗಳು ನಾಯಿಯನ್ನು ದತ್ತು ಸ್ವೀಕರಿಸಲು ಮುಂದೆ ಬಂದಿದ್ದಾರಂತೆ
ಬೆಂಗಳೂರು , ದೆಹಲಿ , ಲಖನೌ ಮತ್ತು ದೇಶದ ಇತರೆ ಭಾಗದ ಎನ್‌ಜಿಒಗಳು ಶ್ವಾನವನ್ನು ದತ್ತು ಪಡೆಯಲು ಉತ್ಸುಕರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ ಗಾಂಧಿ ನಾಯಿಯನ್ನು ಆ ಮಾಲಿಕರಿಗೆ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಂಡು ನಂತ ದತ್ತು ನೀಡುವ ಬಗ್ಗೆ ತೀರ್ಮಾನಿಸುತ್ತಾರೆ.