ಮಂಗಳೂರು: ವಿದ್ಯಾರ್ಥಿಗಳ ಲಿಪ್ ಲಾಕ್, ಸೆಕ್ಸ್ ವೀಡಿಯೋ ವೈರಲ್; ಎಂಟು ಮಂದಿಯ ಮೇಲೆ ಪೊಕ್ಸೊ ಪ್ರಕರಣ ದಾಖಲು
Friday, July 22, 2022
ಮಂಗಳೂರು: ನಗರದ ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಬೆನ್ನಲ್ಲೇ, ಅಶ್ಲೀಲ ವೀಡಿಯೋ ವೈರಲ್ ಆಗಿದ್ದು, ಇದು ಮಂಗಳೂರಿನ ಜನರಿಗೆ ಆಘಾತವನ್ನೇ ತಂದಿದೆ. ಲಿಪ್ ಲಾಕ್ ಮಾಡಿದ್ದ ವಿದ್ಯಾರ್ಥಿನಿಯೊಂದಿಗೆ ವಿದ್ಯಾರ್ಥಿಯೋರ್ವನು ಸೆಕ್ಸ್ ಮಾಡಿದ್ದಾನೆ. ಅದನ್ನು ವೀಡಿಯೋ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬರುತ್ತಲೇ ಮಂಗಳೂರಿನ ಬಂದರು ಠಾಣೆಯಲ್ಲಿ ಪೊಕ್ಸೊ ಮತ್ತು ಐಟಿ ಆ್ಯಕ್ಟ್ ಅಡಿ ಕೇಸು ದಾಖಲಿಸಲಾಗಿದೆ. ಸಿಸಿಬಿ ಪೊಲೀಸರು ಆರೋಪಿಗಳಿಗೆ ಪತ್ತೆಗೆ ಬಲೆ ಬೀಸಿದ್ದಾರೆ.
ಈ ದೃಶ್ಯವನ್ನು ಸೆರೆ ಹಿಡಿದು ವೀಡಿಯೋ ವೈರಲ್ ಮಾಡಿರುವ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಎಂಟಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಅವರನ್ನು ಕಾಲೇಜಿನಿಂದ ವಾರದ ಹಿಂದೆಯೇ ಅಮಾನತು ಮಾಡಲಾಗಿತ್ತು.
ಟ್ರುಥ್ ಆ್ಯಂಡ್ ಡೇರ್ ಹೆಸರಲ್ಲಿ ವಿದ್ಯಾರ್ಥಿನಿಗೆ ಲಿಪ್ ಲಾಕ್ ಕಿಸ್ ಮಾಡಿದ್ದ ವಿದ್ಯಾರ್ಥಿಯೇ ಆ ಬಳಿಕ ಆಕೆಯನ್ನು ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ಮಾಡುವ ವೀಡಿಯೋವನ್ನು ಸ್ವತಃ ಆತನೇ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸದ್ಯ ವಿದ್ಯಾರ್ಥಿನಿ ಅಪ್ರಾಪ್ತಳು ಎಂಬ ಹಿನ್ನಡಲೆಯಲ್ಲಿ ಪೊಕ್ಸೊ ಕೇಸು ದಾಖಲಿಸಲಾಗಿದೆ. ಅಲ್ಲದೆ ಇದನ್ನು ಜೊತೆಗಿದ್ದು ನೋಡಿದವರು ಕೂಡ ಅಪರಾಧಿಗಳಾಗುತ್ತಾರೆ ಎಂಬ ಕಾರಣಕ್ಕೆ 8 ಮಂದಿಯ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿದೆ. ಈ ಕೃತ್ಯ ಐದು ತಿಂಗಳ ಹಿಂದೆಯೇ ನಡೆದಿತ್ತು ಎನ್ನಲಾಗುತ್ತಿದೆ. ಆದರೆ ವಿದ್ಯಾರ್ಥಿ ತನ್ನ ಮೊಬೈಲಿನಲ್ಲಿ ವೀಡಿಯೋ ಮಾಡಿಟ್ಟಿದ್ದ. ಆದರೆ. ಈಗ ವಿಡಿಯೋ ಯಾವ ರೀತಿ ವೈರಲ್ ಆಗಿದೆ, ಯಾಕಾಗಿ ವೈರಲ್ ಮಾಡಿದ್ದಾನೆ ಅನ್ನೋದು ತಿಳಿದುಬಂದಿಲ್ಲ.