ಮಣಿರತ್ನಂ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ 'ಪೊನ್ನಿಯನ್ ಸೆಲ್ವನ್' ವಿರುದ್ಧ ಗರಂ ಆದ ಚೋಳ ಸಮುದಾಯ: ಕೋರ್ಟ್ ನೋಟಿಸ್ ಜಾರಿ
Monday, July 18, 2022
ಚೆನ್ನೈ: ಪ್ರಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ, ಬಿಗ್ ಬಜೆಟ್ ಸಿನಿಮಾ ಪೊನ್ನಿಯಿನ್ ಸೆಲ್ವನ್‌ಗೆ ಕಾನೂನಿನ ತೊಡಕು ಉಂಟಾಗಿದ್ದು, ಸದ್ಯ ಕೋರ್ಟ್ ಮೆಟ್ಟಿಲೇರಿದೆ.
ಚೆನ್ನೈ ಮೂಲದ ಸಂಘಟನೆ ಸಿನಿಮಾ ತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ವಿಕ್ರಮ್, ಐಶ್ವರ್ಯಾ ರೈ, ತ್ರಿಶಾ ಸೇರಿದಂತೆ ಬಹು ತಾರಾಗಣವಿರುವ ಈ ಸಿನಿಮಾ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಸದ್ಯ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಸಿನಿಮಾದ ಪೋಸ್ಟರ್ ಭಾರೀ ಜನ ಮೆಚ್ಚುಗೆ ಗಳಿಸಿತ್ತು. ಬಿಗ್ ಬಜೆಟ್ ಸಿನಿಮಾ ಐತಿಹಾಸಿಕ ಕಥಾಹಂದರವನ್ನು ಹೊಂದಿದೆ ಎಂದು ಪೋಸ್ಟರ್‌ನಿಂದಲೇ ತಿಳಿಯುತ್ತದೆ.
ಆದರೆ ಸದ್ಯ ಈ ಸಿನಿಮಾ ವಿರುದ್ಧ ಚೆನ್ನೈನ ಚೋಳ ಸಮುದಾಯ ಗರಂಗೊಂಡಿದೆ. ಈ ಸಿನಿಮಾದಲ್ಲಿ ಚೋಳ ಸಮುದಾಯವನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ ಈ ಸಮುದಾಯದ ಸಂಘಟನೆಯೊಂದು ಕೋರ್ಟ್ ಮೆಟ್ಟಿಲೇರಿದೆ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಪುಸ್ತಕದಿಂದ ಈ ಕಥೆಯನ್ನು ಆಯ್ದುಕೊಳ್ಳಲಾಗಿದೆ. ಪುಸ್ತಕಕ್ಕೆ ನೀಡಿರುವ ಹೆಸರನ್ನೇ ಸಿನಿಮಾಕ್ಕೂ ಇಡಲಾಗಿದೆ. ಸದ್ಯ ನ್ಯಾಯಾಲಯದಿಂದ ನೋಟಿಸ್ ನೀಡಲಾಗಿದ್ದು, ಚಿತ್ರತಂಡ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.