ವಿಟ್ಲ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ; ವೈದ್ಯ ಅರೆಸ್ಟ್
Monday, July 11, 2022
ವಿಟ್ಲ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯನನ್ನು ವಿಟ್ಲ ಠಾಣಾ ಪೊಲೀಸರು ಪೊಕ್ಸೊ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮಾಣಿ ಮೂಲದ, ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಾ.ಅನುಷ್ ನಾಯಕ್ ಬಂಧಿತ ಆರೋಪಿ.
ಆರೋಪಿ ಡಾ.ಅನುಷ್ ನಾಯಕ್ 14 ವರ್ಷದ ಈ ಅಪ್ರಾಪ್ತ ಬಾಲಕಿಯನ್ನು ಮಾಣಿಯ ಸರಕಾರಿ ಆಸ್ಪತ್ರೆಯಲ್ಲಿ ಪರಿಚಯ ಮಾಡಿಕೊಂಡಿದ್ದ. ಆ ಬಳಿಕ ಆತ ಬಾಲಕಿಯನ್ನು ಪ್ರೀತಿಸುವಂತೆ ತಿಳಿಸಿದ್ದಾನೆ. ಆಕೆಯೂ ಒಪ್ಪಿದ್ದಳು. ಸ್ವಲ್ಪ ಸಮಯದ ಬಳಿಕ ಆರೋಪಿ ಆಕೆಯನ್ನು ತನ್ನ ಕಾರಿನಲ್ಲಿ ಮಾಣಿಯಲ್ಲಿರುವ ಮನೆಗೆ ಕರೆದೊಯ್ದು ಬಾಲಕಿಯ ಮೈಕೈಯನ್ನು ಮುಟ್ಟಿ ಚುಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗೆ ಈಗಾಗಲೇ ಮದುವೆಯಾಗಿದ್ದು ಆತ ಮೊದಲ ಪತ್ನಿಯನ್ನು ತೊರೆದಿದ್ದಾನೆ. ಆ ಬಳಿಕ ಕಳೆದ ಮೇಯಲ್ಲಿ ಮತ್ತೊಂದು ಮದುವೆಯಾಗಿದ್ದಾನೆ. ಈ ವಿಚಾರ ತಿಳಿದ ಬಾಲಕಿ ಆತನ ಸಂಪರ್ಕವನ್ನು ಕಡಿತಗೊಳಿಸಿದ್ದಳು. ಆದರೆ ಆತ ಬಾಲಕಿಗೆ ಕರೆ ಮಾಡಿ 'ನೀನು ಮಾತನಾಡದಿದ್ದರೆ, ನಿನ್ನನ್ನು ನಿನ್ನ ಪೋಷಕರನ್ನು ಕೊಲೆ ಮಾಡುತ್ತೇನೆ' ಎಂದು ಬೆದರಿಕೆಯೊಡ್ಡಿದ್ದಾನೆ. ಅದರಂತೆ ಆತನ ಮೇಲೆ ಬಾಲಕಿ ತಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ಡಾ.ಅನುಷ್ ನಾಯಕ್ ನನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆ.