![ಸುಳ್ಯ ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣ: ನಳಿನ್, ಸುನಿಲ್ ಗೆ ಘೆರಾವ್ ಘೋಷಣೆ, ಲಾಠಿಚಾರ್ಜ್ ಸುಳ್ಯ ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣ: ನಳಿನ್, ಸುನಿಲ್ ಗೆ ಘೆರಾವ್ ಘೋಷಣೆ, ಲಾಠಿಚಾರ್ಜ್](https://blogger.googleusercontent.com/img/b/R29vZ2xl/AVvXsEjL39kFK2rComzhxLBrcR_F3-9hkiAAwJDq_6XAYe7QM3OQRISh7CY0KGDftawrD8000Xgg2B6i2KqtlPwx1BsoFY6OwBN2jR1ac8xmx2_8yVpKNtGaJb65pxUb5KDfpBiTJ3Nn2f8KcTxH/s1600/1658915669220368-0.png)
ಸುಳ್ಯ ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣ: ನಳಿನ್, ಸುನಿಲ್ ಗೆ ಘೆರಾವ್ ಘೋಷಣೆ, ಲಾಠಿಚಾರ್ಜ್
Wednesday, July 27, 2022
ಸುಳ್ಯ : ದುಷ್ಕರ್ಮಿಗಳಿಂದ ನಿನ್ನೆ ರಾತ್ರಿ ಹತ್ಯೆಯಾಗಿರು ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ಯಾತ್ರೆಗೆ ಬೆಳ್ಳಾರೆಗೆ ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ , ಸಚಿವ ಅಂಗಾರ ಶಾಸಕ ಸಂಜೀವ ಮಠಂದೂರು ಹಾಗು ಬಿಜೆಪಿ ನಾಯಕರ ವಿರುದ್ಧ ಸಾವಿರಾರು ಮಂದಿ ಕಾರ್ಯಕರ್ತರು ಧಿಕ್ಕಾರ ಕೂಗಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಬಿಜೆಪಿ ನಾಯಕರಿಗೆ 'ಗೋ ಬ್ಯಾಕ್' ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಬಿಜೆಪಿ ಕಾರ್ಯಕರ್ತರು ನಾಯಕರನ್ನು ದಿಬ್ಬಂಧನಕ್ಕೊಳಪಡಿಸಿ, ನ್ಯಾಯಕ್ಕಾಗಿ ಒತ್ತಾಯಿಸಿದರು. ಈ ಮಧ್ಯೆ ಪಾರ್ಥಿವ ಶರೀರದ ಮೆರವಣಿಗೆ ಮುಂದೆ ಸಾಗಿತ್ತು. ಆದರೆ ಕಾರ್ಯಕರ್ತರು ನಾಯಕರಿಗೆ ದಿಬ್ಬಂಧನೆ ಮಾಡಿ ಸ್ವಲ್ಪ ಕಾಲದವರೆಗೆ ಗೋ ಬ್ಯಾಕ್ , ಧಿಕ್ಕಾರ , ಶೇಮ್ , ಶೇಮ್ ಎಂದು ಘೋಷಣೆ ಕೂಗಿದರು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ನಾಯಕರು ಪ್ರಯತ್ನಿಸಿದರೂ ವಿಫಲರಾದರು.
ಅಲ್ಲದೆ ನಳಿನ್ ಕುಮಾರ್ ಕಟೀಲು ಅವರ ಕಾರನ್ನು ಸಂಪೂರ್ಣ ಅಲುಗಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ತಡೆದರೂ, ಯಾವುದೇ ಕಾರಣಕ್ಕೆ ಹಿಂದೆ ಸರಿಯದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಿದರು.