ಪ್ರಿಯಕರನಲ್ಲಿ ದುಡ್ಡಿಲ್ಲವೆಂದು ದೊಡ್ಡಪ್ಪನ ಮನೆಯನ್ನೇ ದೋಚಿದಳು! ಪ್ರೇಮಿಗಳು ಅರೆಸ್ಟ್
ಬೆಂಗಳೂರು: ಖರ್ಚಿಗೆ ದುಡ್ಡಿಲ್ಲವೆಂದ ಪ್ರಿಯಕರನೊಂದಿಗೆ ಪ್ರೇಯಸಿ ಸೇರಿಕೊಂಡು ತನ್ನ ದೊಡ್ಡಪ್ಪನ ಮನೆಯನ್ನೇ ದೋಚಿದ ಘಟನೆ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಪ್ರೇಮಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಬಿ.ಕಾಂ ವಿದ್ಯಾರ್ಥಿನಿ ದೀಕ್ಷಿತಾ ಮತ್ತು ಮೆಡಿಕಲ್ ವಿದ್ಯಾರ್ಥಿ ಮಧು ಬಂಧಿತ ಆರೋಪಿಗಳು. ಇವರಿಂದ ಕದ್ದಿರುವ 30 ಸಾವಿರ ರೂ. ನಗದು ಮತ್ತು 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಮಧು ಹಾಗೂ ದೀಕ್ಷಿತಾ ಕಳೆದ 2ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಧು, ಪ್ರೇಯಸಿಯಲ್ಲಿ ಖರ್ಚಿಗೆ ಹಣವಿಲ್ಲ ಎಂದು ತನ್ನ ಸಮಸ್ಯೆ ಹೇಳಿಕೊಂಡಿದ್ದಾನೆ. ಆಗ ದೀಕ್ಷಿತಾ, ನೆಲಗೆದರನಹಳ್ಳಿಯಲ್ಲಿರುವ ತನ್ನ ದೊಡ್ಡಪ್ಪ ತಿಮ್ಮೇಗೌಡರ ಬಳಿ ಸಾಕಷ್ಟು ಹಣ, ಚಿನ್ನಾಭರಣವಿದ್ದು, ಅದನ್ನು ಕಳವು ಮಾಡಿದರೆ ಹಣದ ಸಮಸ್ಯೆಗೆ ಪರಿಹಾರ ದೊರೆಯಬಹುದೆಂದು ಸಲಹೆ ನೀಡಿದ್ದಾಳೆ.
ಈ ಹಿನ್ನೆಲೆಯಲ್ಲಿ ಜು.8ರಂದು ಶಿರಾದಿಂದ ಬೆಂಗಳೂರಿಗೆ ಬಂದಿದ್ದ ಮಧು, ಕಳ್ಳತನಕ್ಕೆ ಸಂಚು ರೂಪಿಸಿ ಕೃತ್ಯ ವೆಸಗಿದ್ದಾರೆ ಎಂದು ಪೊಲೀಸರು ಹೇಳಿದರು.
ಮೆಡಿಕಲ್ ವಿದ್ಯಾರ್ಥಿಯಾಗಿರುವ ಮಧು, ಪಿಪಿಇ ಕಿಟ್ ಧರಿಸಿ ತಿಮ್ಮೇಗೌಡರ ಮನೆಯ ಕಾಂಪೌಂಡ್ ನೊಳಗೆ ಬಂದು ಮಾಟ ಮಾಡುವ ಪರಿಕರಗಳನ್ನು ಎಸೆದು ಪರಾರಿಯಾಗಿದ್ದಾನೆ. ಅದೇ ವೇಳೆ ಮನೆಗೆ ಬಂದಿರುವ ದೀಕ್ಷಿತಾ, ಕಾಂಪೌಂಡ್ ಬಳಿ ಯಾರೋ ಮಾಟಮಂತ್ರದ ವಸ್ತುಗಳನ್ನು ಬಿಸಾಡಿದ್ದಾರೆಂದು ಮನೆ ಮಂದಿಯನ್ನು ನಂಬಿಸಿ ಕಾಂಪೌಂಡ್ ಬಳಿ ಕರೆ ತಂದಿದ್ದಳು.
ಇತ್ತ ಎಲ್ಲರೂ ಗಾಬರಿಯಾಗಿ ಆ ವಸ್ತುಗಳನ್ನು ಶುಚಿಗೊಳಿಸುತ್ತಿದ್ದ ವೇಳೆ, ಮನೆಯೊಳಗಡೆ ಹೋಗಿದ್ದ ದೀಕ್ಷಿತಾ, 90 ಸಾವಿರ ರೂ. ನಗದು, 200 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾಳೆ. ಬಳಿಕ ಯಾರಿಗೂ ತಿಳಿಯದಂತೆ ಎಲ್ಲ ತೆಗೆದುಕೊಂಡು ಪರಾರಿಯಾಗಿದ್ದಳು. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಶೋಧಿಸಿದಾಗ ಪಿಪಿಇ ಕಿಟ್ ಧರಿಸಿಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿ ಬಂದು ಹೋಗಿರುವುದು ಗೊತ್ತಾಗಿದೆ. ಬಳಿಕ ಟವರ್ ಲೋಕೇಷನ್ ಹಾಕಿಕೊಂಡು ಶಿರಾದಲ್ಲಿ ಆರೋಪಿಯನ್ನು ಬಂಧಿಸಿದ್ದು, ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.