
ಮಂಗಳೂರು: 1994ರ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯಾಕಾಂಡದ ಪಾತಕಿಗೆ ಬಿಡುಗಡೆ ಭಾಗ್ಯ
Friday, August 5, 2022
ಮಂಗಳೂರು: 1994ರ ಫೆ.23ರ ಮಧ್ಯರಾತ್ರಿ ನಡೆದ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾತ್ರವಲ್ಲದೆ ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಇದೀಗ ಈ ಹತ್ಯಾಕಾಂಡದ ಪಾತಕಿ ಪ್ರವೀಣ್ ಕುಮಾರ್ ಗೆ ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ಸಂಧರ್ಭದಲ್ಲಿ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ವಿಚಾರ ಕೊಲೆಯಾದ ಕುಟುಂಬ ಮಾತ್ರವಲ್ಲದೆ, ಕೊಲೆಗಡುಕನ ಕುಟುಂಬದವರಲ್ಲೂ ದಿಗ್ಬ್ರಮೆ ಮೂಡಿಸಿದೆ.
ದ.ಕ.ಜಿಲ್ಲೆಯ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ಪ್ರವೀಣ್ ಕುಮಾರ್ 1994ರ ಫೆ.23ರಂದು ಮಧ್ಯರಾತ್ರಿ ವಾಮಂಜೂರಿನ ತನ್ನ ಅತ್ತೆ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ, ಅತ್ತೆ ಮಗ ಗೋವಿಂದ, ಅತ್ತೆ ಮಗಳು ಶಕುಂತಳಾ ಹಾಗೂ ಶಕುಂತಲಾ ಪುತ್ರಿ ದೀಪಿಕಾಳನ್ನು ಹಣದಾಸೆಗಾಗಿ ಭೀಕರವಾಗಿ ಹತ್ಯೆ ಮಾಡಿದ್ದ. ಈತನ ಒಂದಂಕಿಯ ಲಾಟರಿ ಹುಚ್ಚಿನಿಂದ ಎಲ್ಲವನ್ನೂ ಕಳೆದುಕೊಂಡಿದ್ದ. ಕೊನೆಗೆ ಪತ್ನಿ, ಆಕೆಯ ಮನೆಯವರ ಚಿನ್ನವನ್ನು ಅಡವಿಟ್ಟು ಕೈ ಖಾಲಿ ಮಾಡಿಕೊಂಡಿದ್ದ. ಆದ್ದರಿಂದ ತನ್ನ ಅತ್ತೆ ಮನೆಯವರನ್ನೇ ಕೊಲೆಗೈದು ಹಣ ದೋಚುವ ಬಗ್ಗೆ ಸ್ಕೆಚ್ ಹಾಕಿದ್ದ.
ಕೊಲೆ ಕೃತ್ಯ ಎಸಗಿದ ದಿನ ಎಲ್ಲರೊಂದಿಗೆ ರಾತ್ರಿ ಆಮ್ಲೆಟ್ ಊಟ ಮಾಡಿ ಮಲಗಿದ್ದಾನೆ. ಮಧ್ಯರಾತ್ರಿ ಪ್ಲ್ಯಾನ್ ಮಾಡಿಕೊಂಡಿದ್ದಂತೆ ಹಾರೆಯಲ್ಲಿ ನಾಲ್ವರನ್ನು ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಆದರೆ ಪೊಲೀಸ್ ತನಿಖೆಯಿಂದ ಈತನ ದುಷ್ಕೃತ್ಯ ಬಯಲಾಗಿ ಬಂಧನಕ್ಕೊಳಗಾಗಿದ್ದ.
ಈ ಪ್ರಕರಣ ಕೆಳ ನ್ಯಾಯಾಲಯದಿಂದ ದೇಶದ ಸುಪ್ರೀಂ ಕೋರ್ಟ್ ವರೆಗೂ ತಲುಪಿ ಸುಪ್ರೀಂ ಕೋರ್ಟ್ ನಲ್ಲಿ ಪ್ರವೀಣ್ ಕುಮಾರ್ ಗೆ 2003ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆ ತೀರ್ಪಿನ ಬಗ್ಗೆ ಕ್ಷಮಾದಾನವನ್ನು ನೀಡಬೇಕೆಂದು ಪ್ರವೀಣ್ ಕುಮಾರ್ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ಹತ್ತು ವರ್ಷಗಳ ಕಾಲ ರಾಷ್ಟ್ರಪತಿ ಭವನದಲ್ಲಿ ವಿಲೇವಾರಿ ಆಗದೇ ಬಾಕಿ ಆಗಿತ್ತು.
ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರನ್ನು ಸುಪ್ರೀಂ ಕೋರ್ಟ್ ಮರಣದಂಡನೆಯಿಂದ ಪಾರು ಮಾಡಿತ್ತು. ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರವೀಣ್ ಕುಮಾರ್ ತನಗೂ ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಮನವಿ ಸಲ್ಲಿಸಿದ್ದ. ಪ್ರವೀಣ್ ಕುಮಾರ್ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಪ್ರವೀಣ್ ಕುಮಾರ್ ಗೆ ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಆದೇಶಿಸಿದೆ.
ಸ್ವಾತಂತ್ರೋತ್ಸವ ಅಮೃತಮಹೋತ್ಸವ ಸಂದರ್ಭ ರಾಜ್ಯದ ಜೈಲುಗಳಲ್ಲಿರುವ ಬಂಧಿಗಳ ಅಕಾಲಿಕ ಬಿಡುಗಡೆಗಾಗಿ ಸ್ಥಾಯಿ ಸಲಹಾ ಮಂಡಳಿ ಸಭೆಯ ಮುಂದೆ ಪ್ರಕರಣ ಮಂಡಿಸಿ ಜೀವಾವಧಿ ಶಿಕ್ಷೆಯನ್ನು ಕ್ಷಮಿಸಿ ಸನ್ನಡತೆಯ ಆಧಾರದಲ್ಲಿ ಅವಧಿ ಪೂರ್ವ ಬಿಡುಗಡೆಗೆ ನಿರ್ಧರಿಸಲಾಗಿದೆ. ಈ ಪಟ್ಟಿಯಲ್ಲಿ ಪ್ರವೀಣ್ ಹೆಸರು ಕೂಡಾ ಇದ್ದು, ಈ ಕುರಿತು ಪರಿಶೀಲಿಸಿ,ಅಪರಾಧಿಯ ಬಂಧುಗಳ ಅಕಾಲಿಕ ಬಿಡುಗಡೆ ಕುರಿತು ಅಭಿಪ್ರಾಯ ವರದಿಯನ್ನು ಸಂಗ್ರಹಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಜು.23ರಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಿಂದ ಆದೇಶ ಮಾಡಲಾಗಿದೆ.
ಈ ಮಾಹಿತಿ ಪ್ರವೀಣ್ ಕುಟುಂಬಸ್ಥರಿಗೆ ಲಭ್ಯವಾಗಿದೆ. ಇದೀಗ ಅವರು ಆಕ್ಷೇಪವೆತ್ತಿದ್ದಾರೆ. ಪ್ರವೀಣ್ ಕುಮಾರ್ ಕುಟುಂಬಿಕರು, ಬಂಧುಗಳು, ಸ್ವತಃ ಆತನ ಪತ್ನಿಯೂ ಆತಂಕಗೊಂಡಿದ್ದಾರೆ. ಬಂಧುಗಳನ್ನೇ ನಿರ್ದಯವಾಗಿ ಹತ್ಯೆ ಮಾಡಿರುವ ಪ್ರವೀಣ್ ಕುಮಾರ್ ಜೈಲಿನಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಗೊಳ್ಳಬಾರದು. ಜೈಲು ಅಧಿಕಾರಿಗಳು ಆದೇಶಕ್ಕೆ ತಡೆನೀಡಬೇಕೆಂದು ಮನವಿ ಮಾಡಿದ್ದಾರೆ.