28 ವರ್ಷಗಳ ಬಳಿಕ ತಾಯಿಯನ್ನು ಸೇರಿದ ಪುತ್ರ ಅತ್ಯಾಚಾರಿ ಅಪ್ಪನನ್ನೂ ಹುಡುಕಿದ: ತಾಯಿ - ಮಗ ಒಂದಾದ್ರು, ಅಪ್ಪ ಜೈಲು ಪಾಲಾದ
Thursday, August 4, 2022
ಶಹಜಹಾನ್‌ಪುರ ( ಉತ್ತರ ಪ್ರದೇಶ ): ಕಾಮುಕರು ಎಸಗಿರುವ ಅತ್ಯಾಚಾರದಿಂದ ಹುಟ್ಟಿ ತಾಯಿಯಿಂದ ಬೇರಾಗಿದ್ದ ಯುವಕನೊಬ್ಬ 28 ವರ್ಷಗಳ ಬಳಿಕ ತನ್ನ ಹತ್ತವ್ವೆಯನ್ನು ಹುಡುಕಿ ತನ್ನ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದ ಕಾಮುಕ ತಂದೆಯನ್ನು ತಾಯಿಯ ಮುಂದೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಬರೋಬ್ಬರಿ 28 ವರ್ಷಗಳ ಹಿಂದೆ ಅಂದರೆ 1994 ರಲ್ಲಿ ಶಹಜಹಾನ್‌ಪುರದ 12 ವರ್ಷದ ಅಪ್ರಾಪ್ತೆಯ ಮೇಲೆ ಸಹೋದರರಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಮನೆಯ ಸಮೀಪದ ಪರಿಚಯಸ್ಥ ಯುವಕರೇ ಈ ಅತ್ಯಾಚಾರ ಎಸಗಿದ್ದರು. ಅಲ್ಲದೆ ಈ ಕುರಿತು ಯಾವುದೇ ದೂರ ದಾಖಲು ಮಾಡದಂತೆ ಬೆದರಿಕೆಯನ್ನೂ ಒಡ್ಡಿದ್ದರು.
ದುರದೃಷ್ಟವಶಾತ್ ಅತ್ಯಾಚಾರದಿಂದ ಬಾಲಕಿ ಗರ್ಭಿಣಿಯಾಗಿದ್ದು, ಗಂಡು ಮಗುವಿಗೆ ಜನ್ಮವನ್ನೂ ನೀಡಿದ್ದಳು. ಆದರೆ ಈ ಮಗು ಬಾಲಕಿಯ ಭವಿಷ್ಯಕ್ಕೆ ಕಂಟಕವಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನು ಬೇರೆಯವರಿಗೆ ನೀಡಿ ಇಡೀ ಕುಟುಂಬವೇ ಶಹಜಹಾನ್‌ಪುರವನ್ನು ತೊರೆದು ರಾಂಪುರಕ್ಕೆ ಸ್ಥಳಾಂತರಗೊಂಡಿತು. ಬಾಲಕಿ ಪ್ರಾಪ್ತಳಾಗುತ್ತಿದ್ದಂತೆಯೇ ಸ್ಥಳೀಯ ನಿವಾಸಿಯೊಬ್ಬನೊಂದಿಗೆ ಮದುವೆಯನ್ನೂ ಮಾಡಿಕೊಡಲಾಯಿತು. 10 ವರ್ಷ ಇಬ್ಬರ ಮಧ್ಯೆ ಸಂಸಾರ ಚೆನ್ನಾಗಿಯೇ ನಡೆಯಿತು. ಆದರೆ ಆಕೆಯ ಅದೃಷ್ಟ ಕೆಟ್ಟಿತ್ತೋ ಗೊತ್ತಿಲ್ಲ ಪತ್ನಿಯ ಮೇಲೆ ಚಿಕ್ಕವಯಸ್ಸಿನಲ್ಲಿ ಅತ್ಯಾಚಾರ ನಡೆದ ವಿಷಾರ ಆಕೆಯ ಗಂಡನಿಗೆ ತಿಳಿದು, ಆತ ಈಕೆಗೆ ಡಿವೋರ್ಸ್ ನೀಡಿದ್ದಾನೆ.
ಇತ್ತ ಅತ್ಯಾಚಾರದಿಂದ ಹುಟ್ಟಿದ ಪುತ್ರ ಬೆಳೆದು ದೊಡ್ಡವನಾಗಿದ್ದ. 28ನೇ ವಯಸ್ಸಿನ ವೇಳೆ ಆತನಿಗೆ ತನ್ನ ಹೆತ್ತ ತಾಯಿ - ತಂದೆಯ ಬಗ್ಗೆ ಕುತೂಹಲ ಹೆಚ್ಚಾಯಿತು. ತನ್ನನ್ನು ಬೆಳೆಸುತ್ತಿರುವವರು ಅಸಲಿ ತಂದೆ - ತಾಯಿಯಲ್ಲ ಎನ್ನುವ ವಿಷಯ ತಿಳಿಯಿತು. ಈ ಬಗ್ಗೆ ಆತ ತನಿಖೆಯನ್ನೇ ಕೈಗೊಂಡುಬಿಟ್ಟ. ಅಲ್ಲಲ್ಲಿ ವಿಚಾರಿಸಿದಾಗ ಆತನಿಗೆ ತನ್ನ ತಾಯಿಯ ವಿಳಾಸ ಸಿಕ್ಕಿತು. ತಾಯಿಯ ಬಳಿ ಹೋಗಿ ಎಲ್ಲಾ ವಿಚಾರವನ್ನು ಹೇಳಿದಾಗ ಆಕೆಗೂ ತನ್ನ ಪುತ್ರನನ್ನು ಕಂಡು ಸ್ವರ್ಗವೇ ಸಿಕ್ಕಂತಾಯಿತು. ಆಗಲೇ ಆತ ತನ್ನ ತಂದೆಯ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಆಗಆತನಿಗೆ ತನ್ನ ಮೇಲಿನ ಅತ್ಯಾಚಾರದ ಕಥೆಯನ್ನು ಹೇಳಿದ್ದಾಳೆ. ಇಬ್ಬರೂ ಸೇರಿ ತಂದೆಯ ಹುಡುಕಾಟ ಆರಂಭಿಸಿ ಡಿಎನ್ಎ ಪರೀಕ್ಷೆಗೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಇದಕ್ಕೆ ಅನುಮತಿ ನೀಡಿತು. ಆಗ ಮತ್ತೆ ಅತ್ಯಾಚಾರ ಪ್ರಕರಣ ಮತ್ತೆ ತೆರೆಯಲ್ಪಟ್ಟಿತು.
ಪೊಲೀಸರು ಒಬ್ಬ ಆರೋಪಿ ಮೊಹಮ್ಮದ್ ರಾಜಿಯನ್ನು ( 48 ) ಹೈದರಾಬಾದ್‌ನಲ್ಲಿ ಹಾಗೂ ಮತ್ತೋರ್ವ ಆರೋಪಿ ನಖಿ ಹಸನ್‌ನನ್ನು ಒಡಿಶಾದಲ್ಲಿ ಪತ್ತೆಹಚ್ಚಿದರು. ಮೊದಲು ಮೊಹಮ್ಮದ್ ರಾಜಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಡಿಎನ್ ಎ ಮ್ಯಾಚ್ ಆಗಿ ಈತನೇ ಆ ಯುವಕನ ತಂದೆ ಎನ್ನುವುದು ವರದಿಯಿಂದ ಬಹಿರಂಗಗೊಂಡಿತು.
ಇದೀಗ ಮೊಹಮ್ಮದ್ ರಾಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.