ಚೆನ್ನೈ: ನೌಕರರನ್ನು ಶೌಚಗೃಹದಲ್ಲಿ ಕೂಡಿ ಹಾಕಿ ಬ್ಯಾಂಕ್ ನ 32 ಕೆಜಿ ಚಿನ್ನಾಭರಣಗಳನ್ನು ದೋಚಿದ ದುಷ್ಕರ್ಮಿಗಳು
Sunday, August 14, 2022
ಚೆನ್ನೈ: ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಉದ್ಯೋಗಿಗಳನ್ನು ಶೌಚಗೃಹದಲ್ಲಿ ಕೂಡಿ ಹಾಕಿ ಹಲವಾರು ಕೋಟಿ ರೂ.ಗಳ 32ಕೆಜಿ ಚಿನ್ನವನ್ನು ದರೋಡೆಗೈದಿರುವ ಘಟನೆ ಅರುಂಬಾಕಂ ಪ್ರದೇಶದಲ್ಲಿರುವ ಫೆಡರಲ್‌ಬ್ಯಾಂಕ್ ಗೋಲ್ಡ್ ಲೋನ್ ಶಾಖೆಯಲ್ಲಿ ನಡೆದಿದೆ.
ಮೂವರು ಮುಸುಕುಧಾರಿಗಳು ಗುಂಪು ಬ್ಯಾಂಕ್‌ನ ಸ್ಟ್ರಾಂಗ್ ರೂಂನ ಬೀಗದ ಕೀಗಳನ್ನು ಕಸಿದುಕೊಂಡ ಉದ್ಯೋಗಿಗಳನ್ನು ಶೌಚಗೃಹದಲ್ಲಿ ಕೂಡಿಹಾಕಿ, ಬ್ಯಾಗ್‌ಗಳಲ್ಲಿ ಚಿನ್ನ ತುಂಬಿಸಿ ಪರಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸುಮಾರು 32 ಕೆ.ಜಿ.ಯಷ್ಟು ಚಿನ್ನಾಭರಣ ದರೋಡೆಯಾಗಿದೆ ಎಂದು ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜೀವಾಲ್ ತಿಳಿಸಿದ್ದಾರೆ. ಈ ದರೋಡೆಯಲ್ಲಿ ಬ್ಯಾಂಕ್ ನ ಒಳಗಿರುವವರ ಕೆಲಸಾಗಿರುವ ಸಾಧ್ಯತೆಯಿದೆ. ದರೋಡೆಕೋರರಲ್ಲಿ ಓರ್ವನು ಅದೇ ಬ್ಯಾಕ್ ಶಾಖೆಯ ಉದ್ಯೋಗಿಯೆಂದು ಶಂಕಿಸಲಾಗಿದೆಯೆಂದು ಜಂಟಿ ಪೊಲೀಸ್ ಆಯುಕ್ತ ಟಿ.ಎಸ್.ಅನ್ನು ತಿಳಿಸಿದ್ದಾರೆ.
ಕೃತ್ಯವೆಸಗುವ ಮುನ್ನ ದರೋಡೆಕೋರರು ತನಗೆ ಲಘುಪೇಯವನ್ನು ನೀಡಿದ್ದರು. ಅದನ್ನು ಸೇವಿಸಿದ ಸ್ವಲ್ಪ ಹೊತ್ತಿನಲ್ಲಿ ತಾನು ಪ್ರಜ್ಞಾಹೀನನಾದೆ ಎಂದು ಬ್ಯಾಂಕ್‌ನ ಭದ್ರತಾ ಕಾವಲುಗಾರ ಹೇಳಿದ್ದಾನೆ. ದರೋಡೆಕೋರರಲ್ಲಿ ಒಬ್ಬಾತ ಬ್ಯಾಂಕ್ ನೌಕರನಾಗಿದ್ದರಿಂದ ಕಾವಲುಗಾರನಿಗೆ ಅವರ ಬಗ್ಗೆ ಸಂದೇಹ ಬಂದಿರಲಿಲ್ಲವೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುಷ್ಕರ್ಮಿಗಳನ್ನು ಸೆರೆಹಿಡಿಯಲು ಪೊಲೀಸರು ವಿಶೇಷ ತಂಡಗಳನ್ನು ನಿರ್ಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.