ಉದ್ಯಮಿ ಪುತ್ರನನ್ನು ಅಪಹರಿಸಿ 4 ಕೋಟಿ ಕೊಡದಿದ್ದಲ್ಲಿ ರೇಪ್ ಕೇಸ್ ಹಾಕ್ತೀನಿ ಎಂದ ಲೇಡಿ ಗ್ಯಾಂಗ್
Thursday, August 25, 2022
ಮಂಗಳೂರು: ಮಹಿಳೆ ಸೇರಿದಂತೆ ನಾಲ್ವರ ಗ್ಯಾಂಗ್ ಒಂದು ಉದ್ಯಮಿ ಪುತ್ರನನ್ನು ಅಪಹರಿಸಿ 4 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ರವಿ ಇಂಡಸ್ಟ್ರೀಯಲ್ ಸಪ್ಲೈನ ಮಾಲಕ ರವಿಯವರ ಪುತ್ರ ಸೂರಜ್ ಎಂಬವರನ್ನು ಪುಷ್ಪಲತಾ ಎಂಬ ಲೇಡಿ ಗ್ಯಾಂಗ್ ಅಪಹರಿಸಿತ್ತು. ಅಪಹರಣಕ್ಕೂ ಮೊದಲು ಸರ್ಕಾರಿ ಟೆಂಡರ್ ಕೊಡಿಸುವುದಾಗಿ ಹೇಳಿ ಸೂರಜ್ ನನ್ನು ಪುಷ್ಪಲತಾ ಭೇಟಿಯಾಗಿದ್ದಳು. ಪುಷ್ಪಲತಾ ಶ್ರೀ ಅಬ್ದುಲ್ ಕಲಾಂ ಚ್ಯಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆಯಾಗಿದ್ದಾಳೆ.
ಟೆಂಡರ್ ವಿಚಾರವಾಗಿ ಮಾತನಾಡಲು ಇದೆ ಎಂದು ಹೇಳಿ ಸೂರಜ್ ನಿವಾಸಕ್ಕೆ ಪುಷ್ಪಲತಾ ಬಂದಿದ್ದಾಳೆ. ಈ ವೇಳೆ ಆಕೆ ತನ್ನ ಸಹಚರ ಸಂತೋಷ್ ಎಂಬಾತನನ್ನು ಐಎಎಸ್ ಅಧಿಕಾರಿಯ ಪಿಎ ಎಂದು ಪರಿಚಯ ಮಾಡಿದ್ದಾಳೆ. ಆಕೆ ಸೂರಜ್ ನೊಂದಿಗೆ ಮಾತನಾಡುತ್ತಿರುವಾಗಲೇ ಇನ್ನಿಬ್ಬರು ಮನೆಯೊಳಗೆ ನುಗ್ಗಿ ಗನ್ ತೋರಿಸಿ 4 ಕೋಟಿ ರೂ. ಹಣ ಕೊಡಬೇಕೆಂದು ಡಿಮ್ಯಾಂಡ್ ಇಟ್ಟು, ಸೂರಜ್ನನ್ನು ಅಪಹರಿಸಿದ್ದಾರೆ.
4 ಕೋಟಿ ರೂ. ಹಣ ಕೊಡದಿದ್ದರೆ ರೇಪ್ ಕೇಸ್ ದಾಖಲಿಸುತ್ತೇವೆ ಎಂದು ಪುಷ್ಪಲತಾ ಬೆದರಿಕೆ ಹಾಕಿದ್ದಾಳೆ. ತನ್ನ ಬಳಿ ಅಷ್ಟು ಹಣ ಇಲ್ಲ. ಮನೆ ಮಾರಾಟ ಮಾಡಿದರೂ ಅಷ್ಟು ದೊಡ್ಡ ಮೊತ್ತ ಸಿಗಲ್ಲ ಎಂದು ಸೂರಜ್ ಹೇಳಿದ್ದಾರೆ. ಆ ಬಳಿಕ ನಂತರ ಸೂರಜ್ ತನ್ನ ಸ್ನೇಹಿತ ಗುರುಮೂರ್ತಿಗೆ ಹೇಳಿ 25 ಲಕ್ಷ ರೂ. ತರುವಂತೆ ಹೇಳಿದ್ದರು. ಸೂರಜ್ ಮಾತಿನಂತೆ ಗುರುಮೂರ್ತಿ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಬಳಿ 25 ಲಕ್ಷ ರೂ. ಹಣ ತಂದಿದ್ದರು. ಆದರೆ ಪುಷ್ಪಲತಾ ಇರದ ಕಾರಣ ಗುರುಮೂರ್ತಿ ಯಾರಿಗೂ ಹಣ ನೀಡದೇ ಹಿಂದಿರುಗಿದ್ದರು.
ಇತ್ತ ಸೂರಜ್ ತಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪುತ್ರನನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಪುಷ್ಪಾ ಅಲಿಯಾಸ್ ಪುಷ್ಪಲತಾ, ಅಯ್ಯಪ್ಪ ಅಲಿಯಾಸ್ ಅರ್ಜುನ್, ರಾಕೇಶ್ ಹಾಗೂ ಸಂತೋಷ್ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.