
ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳದ ಆರೋಪಿ ಮಲತಂದೆಗೆ 5 ವರ್ಷ ಜೈಲು ಶಿಕ್ಷೆ
Sunday, August 28, 2022
ಮಂಗಳೂರು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಮಲತಂದೆಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೊ) ಎಫ್.ಟಿ.ಎಸ್.ಸಿ -1 ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ 8 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮೂಡುಬಿದಿರೆಯ ಬೆಳುವಾಯಿ ಗ್ರಾಮದ ಕರಿಯನಂಗಡಿ ಬಳಿಯ ಬಾಡಿಗೆ ಮನೆ ನಿವಾಸಿ ರಂಜಿತ್ ಕುಮಾರ್ ಅಪರಾಧಿ.
ರಂಜಿತ್ ಕುಮಾರ್ ಅಪ್ರಾಪ್ತ ಬಾಲಕಿಯ ತಾಯಿಯ ಎರಡನೇ ಪತಿಯಾಗಿದ್ದ. 2019ರ ಮೇ 8 ರಂದು ಮುಂಜಾನೆ ಆರೋಪಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಎಸಗುತ್ತಿರುವುದನ್ನು ಬಾಲಕಿಯ ತಾಯಿ ಪ್ರತ್ಯಕ್ಷವಾಗಿ ನೋಡಿದ್ದರು. ಆಕೆ ರಂಜಿತ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದರು. ಆಗ ಆತ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯನ್ನೊಡ್ಡಿದ್ದ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಾಯಿ ನೀಡಿದ್ದ ದೂರಿನಂತೆ ರಂಜಿತ್ ಕುಮಾರ್ ವಿರುದ್ಧ ಪೊಕ್ಸೊ ಹಾಗೂ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಾಗಿತ್ತು.
ಮೂಡುಬಿದಿರೆ ಪೊಲೀಸ್ ಠಾಣೆಯ ಎಸ್ಸೈ ಸಾವಿತ್ರಿ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡು ವಾದ ಪ್ರತಿವಾದವನ್ನು ಆಲಿಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೊ) ಎಫ್.ಟಿ.ಎಸ್.ಸಿ -1 ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿಯವರು ರಂಜಿತ್ ಕುಮಾರ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆತನಿಗೆ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 8 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ವಾದ ಮಂಡಿಸಿದ್ದಾರೆ.