ಗುವಾಹಟಿ: 500 ರೂ. ಬೆಟ್ಟಿಂಗ್ ಗೆ ಸ್ನೇಹಿತನ ತಲೆಯನ್ನೇ ಕಡಿದು 25 ಕಿ.ಮೀ. ನಡೆದು ಪೊಲೀಸ್ ಠಾಣೆಗೆ ಶರಣಾದ ಭೂಪ
Wednesday, August 17, 2022
ಗುವಾಹಟಿ: ಫುಟ್ ಬಾಲ್ ಪಂದ್ಯಾಟದ ವೇಳೆ 500 ರೂ. ಬೆಟ್ಟಿಂಗ್ ಕಟ್ಟಿರುವ ವೇಳೆ ಗಲಾಟೆ ನಡೆದು ವ್ಯಕ್ತಿಯೊಬ್ಬ ತನ್ನ ಸ್ನೇಹಿತನೇ ರುಂಡವನ್ನೇ ಕಡಿದು 25 ಕಿ.ಮೀ. ನಡೆದುಕೊಂಡೇ ಬಂದು ಪೊಲೀಸ್ ಠಾಣೆಗೆ ಶರಣಾಗಿರುವ ಆತಂಕಕಾರಿ ಘಟನೆಯೊಂದು ಅಸ್ಸಾಂನಲ್ಲಿ ನಡೆದಿದೆ.
ಉತ್ತರ ಅಸ್ಸಾಂನ ಸೋನಿತ್ ಪುರ ಜಿಲ್ಲೆಯ ದೊಯಲೂರು ಪ್ರದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಫುಟ್ ಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಪಂದ್ಯಾಟವನ್ನು ವೀಕ್ಷಿಸುತ್ತಿದ್ದ ತುನಿರಾಂ ಮ್ಯಾಡ್ರಿ ಒಂದು ತಂಡವನ್ನು ಹೇಮ್ ರಾಂ ಮತ್ತೊಂದು ತಂಡವನ್ನು ಬೆಂಬಲಿಸಿ 500 ರೂ. ಬೆಟ್ಟಿಂಗ್ ಕಟ್ಟಿದ್ದಾರೆ. ಹೇಮ್ ರಾಂ ಬೆಟ್ಟಿಂಗ್ ನಲ್ಲಿ ಗೆದ್ದು ತುನಿರಾಂನಲ್ಲಿ ಹಣ ಕೇಳಿದ್ದಾನೆ.
ಆದರೆ ಬೆಟ್ಟಿಂಗ್ ಹಣವನ್ನು ನೀಡದ ಆತ ಹೇಮ್ ರಾಂ ಅನ್ನು ಊಟಕ್ಕೆ ಹೋಗೋಣ ಎಂದು ಕರೆದಿದ್ದಾನೆ. ಆದರೆ ಹೇಮ್ ರಾಂ ಹಣಕ್ಕಾಗಿ ತುನಿರಾಂ ಮ್ಯಾಡ್ರಿಯನ್ನು ಒತ್ತಾಯಿಸುತ್ತಲೇ ಇದ್ದನು. ಇದರಿಂದ ಕೋಪಗೊಂಡ ಮ್ಯಾಡ್ರಿ ತನ್ನ ಚೀಲದೊಳಗಿದ್ದ ಹರಿತವಾದ ಮಾರಕಾಯುಧದಿಂದ ಹೇಮ್ ರಾಂ ರುಂಡವನ್ನು ಕಡಿದೇ ಬಿಟ್ಟಿದ್ದಾನೆ.
ಬಳಿಕ ಆತ ರುಂಡ ಸಮೇತ 25 ಕಿ.ಮೀ. ದೂರ ನಡೆದುಕೊಂಡೇ ಬಂದು ರಂಗಪರಾ ಪೊಲೀಸ್ ಠಾಣೆಯಲ್ಲಿ ಸೋಮವಾರ ತಡರಾತ್ರಿ ಶರಣಾಗಿದ್ದಾನೆ. ಆರೋಪಿಯನ್ನು ತಕ್ಷಣ ವಶಕ್ಕೆ ತೆಗೆದುಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.