ಏಳರ ಪ್ರಾಯದಲ್ಲಿ ನಾಪತ್ತೆಯಾದಾಕೆ 9 ವರ್ಷಗಳ ಬಳಿಕ ಮತ್ತೆ ಮನೆ ಮಂದಿಯ ಸೇರಿದ್ಲು: ಈ ನಡುವಿನ ಆಕೆಯ ಜೀವನ ವಿಚಾರ ಕೇಳಿದ್ರೆ ಮನ ಕಲಕುತ್ತೆ
Sunday, August 7, 2022
ಮುಂಬೈ: ಏಳರ ಪ್ರಾಯದಲ್ಲಿ ಶಾಲೆಗೆ ಹೋಗಿದ್ದ ಸಂದರ್ಭ ನಾಪತ್ತೆಯಾಗಿದ್ದ ಹುಡುಗಿಯೊಬ್ಬಳು ಬರೋಬ್ಬರಿ 9 ವರ್ಷಗಳ ಬಳಿಕ ಆ.4 ಮರಳಿ ತಮ್ಮ ಕುಟುಂಬವನ್ನು ಸೇರಿದ ಅಪರೂಪದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿ ಡಿಸೋಜಾ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತನಗೆ ಮಕ್ಕಳಿಲ್ಲದಿದ್ದ ಸಂದರ್ಭ ಈ ಬಾಲಕಿಯನ್ನು ಅಪಹರಿಸಿದ್ದ ಹ್ಯಾರಿ ಡಿಸೋಜ, ತನಗೆ ಹೆಣ್ಣು ಮಗುವಾದ ತಕ್ಷಣದಿಂದ ಈಕೆಯನ್ನು ಬಲವಂತವಾಗಿ ಕೆಲಸ ಮಾಡಲು ಕಳುಹಿಸಿ ಅನಾದರ ಮಾಡಿದ್ದ ಎಂದು ಮುಂಬೈನ ಡಿ.ಎನ್ . ನಗರ ಪೊಲೀಸರು ತಿಳಿಸಿದ್ದಾರೆ.
ಪೂಜಾ ಗೌಡ್ ಎಂಬ ಹೆಸರಿನ ಏಳು ವರ್ಷದ ಈ ಬಾಲಕಿ ಅಂಧೇರಿಯಲ್ಲಿರುವ ಗಿಲ್ಬರ್ಟ್ ಏರಿಯಾದಲ್ಲಿ ತನ್ನ ಪಾಲಕರೊಂದಿಗೆ ವಾಸವಿದ್ದಳು. ಅಂಧೇರಿಯ ಕಾಮಾ ಪ್ರದೇಶದಲ್ಲಿನ ಮುನ್ಸಿಪಾಲ್ ಶಾಲೆಯಲ್ಲಿ ಪೂಜಾ ವ್ಯಾಸಂಗ ಮಾಡುತ್ತಿದ್ದಳು. 2013ರ ಜನವರಿ 22ರಂದು ಶಾಲೆಗೆ ಹೋದ ಪೂಜಾ ತಿರುಗಿ ಮನೆಗೆ ಹಿಂದಿರುಗಲೇ ಇಲ್ಲ. ಆಕೆ ಮರಳದಿರುವುದನ್ನು ನೋಡಿ, ಗಾಬರಿಗೊಂಡ ಕುಟುಂಬ ಹುಡುಕಾಡಲು ಆರಂಭಿಸಿರು. ಸಾಕಷ್ಟು ಹುಡುಕಾಟದ ಬಳಿಕವೂ ಪೂಜಾ ಸಿಗದಿದ್ದಾಗ ಆಕೆಯ ಪಾಲಕರು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಹ ಸಾಕಷ್ಟು ಹುಡುಕಾಡಿದರೂ ಯಾವುದೇ ಮಾಹಿತಿ ದೊರೆಯಲೇ ಇಲ್ಲ . ಪೂಜಾ ಸಿಗುವುದು ಇನ್ನು ಅನುಮಾನ ಎಂದೇ ಭಾವಿಸಿದ್ದರು.
ಸದ್ಯ ಪೂಜಾ ಮರಳಿ ಮತ್ತೆ ಆಕೆಯ ಹೆತ್ತವರನ್ನು ಸೇರಿದ್ದಾಳೆ. ಈ ಬಗ್ಗೆ ಡಿ.ಎನ್.ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಮಿಲಿಂದ್ ಕುರ್ದ ಮಾತನಾಡಿದ್ದಾರೆ. ಪೂಜಾ ನಾಪತ್ತೆಯಾದ ದೂರ ದಾಖಲಾದ ಬಳಿಕ ಪೊಲೀಸರು ನಿರಂತರ ಹುಡುಕುತ್ತಿದ್ದರು. ಆದರೆ ನಮ್ಮ ಪ್ರಯತ್ನಗಳು ವಿಫಲವಾಗಿತ್ತು. ಈ ವಾರದ ಆರಂಭದಲ್ಲಿ ಮಹಿಳೆಯೊಬ್ಬರಿಂದ ಲಭ್ಯವಾದ ಸುಳಿವು ಪೂಜಾಳ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವನ್ನೇ ನೀಡಿತು . ವಿಲೆ ಪಾರ್ಲೆದಲ್ಲಿರುವ ನೆಹರು ನಗರ ಕೊಳಗೇರಿಯಲ್ಲಿ ಒಂದು ಹದಿಹರೆಯದ ಹುಡುಗಿ ಮೇಲೆ ಅನುಮಾನವಿದೆ ಎಂದು ಆಕೆ ನಮಗೆ ಸುಳಿವು ನೀಡಿದ್ದಳು . ಆದ್ದರಿಂದ ಆ ಮನೆಗೆ ಒಂದು ಪೊಲೀಸ್ ತಂಡವನ್ನು ಕಳುಹಿಸಿ , ವಿಚಾರಣೆ ನಡೆಸಿ , ಮಾಹಿತಿ ಪಡೆಯಲು ಹೇಳಿದೆವು
ಸ್ಲಮ್‌ನ ಮನೆಯೊಂದರಲ್ಲಿ ವಾಸವಿದ್ದ ಆ ದಂಪತಿ ಆರಂಭದ ಸೂಕ್ತ ಮಾಹಿತಿ ಕೊಡಲು ನಿರಕಾರಿಸಿದರು . ವಿಚಾರಣೆಯ ತೀವ್ರಗೊಳಿಸಿದಾಗ, ತಮ್ಮ ಬಳಿ ಇರುವ ಇಬ್ಬರು ಹೆಣ್ಣು ಮಕ್ಕಳಲ್ಲಿ ಓರ್ವಳು ನಮ್ಮ ಪುತ್ರಿಯಲ್ಲ. ಆಕೆಯನ್ನು ನಾವೇ ಬೆಳೆಸಿದೆವು ಎಂದು ಬಾಯಿಬಿಟ್ಟಿದ್ದಾರೆ. ತಕ್ಷಣ ಹೆಚ್ಚಿನ ವಿಚಾರಣೆಗೆಂದು ಇಡೀ ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು. ಸದ್ಯ 16ನೇ ವಯಸ್ಸಿನಲ್ಲಿರುವ ಸಂತ್ರಸ್ತ ಪೂಜಾಳನ್ನು ಬೇರೆ ಕೋಣೆಯಲ್ಲಿ ಕೂರಿಸಿ, ದಂಪತಿಯನ್ನು ಪೊಲೀಸ್ ಶೈಲಿಯಲ್ಲಿ ವಿಚಾರಿಸಲಾಯಿತು. ಬಳಿಕ ನಡೆದ ಒಂದೊಂದೆ ಕರಾಳ ಸತ್ಯವನ್ನು ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ . ಅವರ ಬಳಿಯಿದ್ದ ಪೂಜಾ 9 ವರ್ಷಗಳ ಹಿಂದೆ ಶಾಲೆಯ ಸಮೀಪ ನಾಪತ್ತೆಯಾಗಿದ್ದ ಹುಡುಗಿ ಎಂಬುದು ಪೊಲೀಸರಿಗೆ ಖಚಿತವಾಯಿತು ಎಂದು ಮಿಲಿಂದ್ ಕುರ್ದ ತಿಳಿಸಿದರು.
9 ವರ್ಷಗಳ ಹಿಂದೆ ಶಾಲೆಯ ಸಮೀಪ ಪೂಜಾಳನ್ನು ಆರೋಪಿ ಹ್ಯಾರಿ ಅಪಹರಿಸಿ ತನ್ನ ಮನೆಗೆ ಕರೆ ತಂದಿದ್ದ. ಅಂದಿನಿಂದ ಹ್ಯಾರಿ ಮತ್ತು ಆತನ ಪತ್ನಿ ಆಕೆಯನ್ನು ತಮ್ಮ ಮಗಳಂತೆ ಬೆಳೆಸುತ್ತಿದ್ದರು. ಆದರೆ ಮೂರು ವರ್ಷಗಳ ಬಳಿಕ ದಂಪತಿಗೆ ಒಂದು ಹೆಣ್ಣು ಮಗು ಜನಿಸಿದೆ. ಅಲ್ಲಿಂದಾಚೆಗೆ ಪೂಜಾ ಜೀವನದಲ್ಲಿ ಕರಾಳ ಅಧ್ಯಾಯ ಆರಂಭವಾಯಿತು. ಮುಂದೆ ಆರು ವರ್ಷಗಳವರೆಗೆ ಪೂಜಾಳನ್ನು ಕೆಟ್ಟದಾಗಿ ನಡೆಸಿಕೊಂಡ ಕುಟುಂಬ, ಆಕೆಯನ್ನು ಮನೆಗೆಲಸಕ್ಕೆ ದೂಡಿದರು. ಆಕೆ ದುಡಿದ ಹಣವನೆಲ್ಲ ಕಸಿದುಕೊಳ್ಳುತ್ತಿದ್ದರು.
ಕೊನೆಗೂ ಪೂಜಾ ಬಾಳಲ್ಲಿ ಹೊಸ ಬದುಕು ಸಿಕ್ಕಿದೆ . ಅವಳ ಅಪಹರಿಸಿದಕ್ಕೆ ಹ್ಯಾರಿ ಮತ್ತು ಆತನ ಪತ್ನಿ ವಿರುದ್ಧ ಕಿಡ್ನಾಪ್ , ತಪ್ಪಾದ ಬಂಧನ , ಅಪ್ರಾಪ್ತರ ಕಳ್ಳಸಾಗಾಣೆ ಮತ್ತು ಕಾನೂನುಬಾಹಿರ ಕಾರ್ಮಿಕ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಇದೇ ಸಂದರ್ಭದಲ್ಲಿ ಪೂಜಾ ಕುಟುಂಬಕ್ಕೆ ತಮ್ಮ ಮಗಳು ಮತ್ತೆ ಸಿಕ್ಕಿದ್ದನ್ನು ಕೇಳಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ . ಸುದ್ದಿ ಕೇಳಿ ಪೊಲೀಸ್ ಠಾಣೆಗೆ ದೌಡಾಯಿಸಿದ ಪೂಜಾ ಪಾಲಕರು ತಮ್ಮ ಮಗಳನ್ನು ನೋಡಿ ಆನಂದಭಾಷ್ಪ ಸುರಿಸಿ , ಬಾಚಿ ತಬ್ಬಿಕೊಂಡು , ಮುದ್ದಾಡಿದರು . ಮಗಳನ್ನು ಪತ್ತೆ ಮಾಡಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು .