ರಾಯಚೂರು: ಸಂಬಂಧಿಗಳ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ರಸ್ತೆ ಅಪಘಾತಕ್ಕೆ ಬಲಿ
Tuesday, August 16, 2022
ರಾಯಚೂರು: ಸಂಬಂಧಿಗಳ ಅಂತ್ಯಸಂಸ್ಕಾರಕ್ಕೆಂದು ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಘಟನೆ ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ಮಂಗಳವಾರ ಸಂಭವಿಸಿದೆ.
ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಗಳಾದ ಬಸವರಾಜ್ ಮಾಸಳಿ(40) , ಬಸವರಾಜ್‌ರ ಪುತ್ರ ನರೇಶ್ (8) ಹಾಗೂ ಬಸವರಾಜ ಚಿಕ್ಕಮ್ಮ ಭೀಮವ್ವ ಮಾಸಳಿ (50) ಮೃತಪಟ್ಟವರು.
ಮೃತರೆಲ್ಲರೂ ಸಂಬಂಧಿಕರೊಬ್ಬರು ಅಂತ್ರಕ್ರಿಯೆಯಲ್ಲಿ ಪಾಲ್ಗೊಳ್ಳಲೆಂದು ಒಂದೇ ಬೈಕ್‌ನಲ್ಲಿ ಕಲ್ಲೂರಿನಿಂದ ಕುರ್ಡಿ ಗ್ರಾಮಕ್ಕೆ ಹೊರಟಿದ್ದರು. ಮಾರ್ಗಮಧ್ಯೆ ಈಚರ್ ಲಾರಿಯೊಂದು ಇವರು ಸಂಚರಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡಿದಿದೆ. ರಾಯಚೂರು ಮಾರ್ಗವಾಗಿ ಹೊರಟಿದ್ದ ಈಚರ್ ವಾಹನ ವೇಗವಾಗಿ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆಬದಿಯ ಜಮೀನಿನತ್ತ ನುಗ್ಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವು ರಸ್ತೆ ಬದಿಯ ಜಮೀನಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಬೆಚ್ಚಿಬೀಳಿಸುವಂತಿತ್ತು. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೂವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.