
ಸಂಚರಿಸುತ್ತಿದ್ದ ಬೈಕ್ ಮೇಲೆಯೇ ಉರುಳಿ ಬಿದ್ದ ಮರ: ಬೈಕ್ ಸವಾರ ಮೃತ್ಯು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
Sunday, August 7, 2022
ಹಾಸನ: ಸಂಚಾರದಲ್ಲಿದ್ದ ಬೈಕ್ ಮೇಲೆಯೇ ಬೃಹತ್ ಮರವೊಂದು ಉರುಳಿ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆಯೊಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಾಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕಲ್ಲೇಸೋಮನಹಳ್ಳಿ ಗ್ರಾಮದ ನಿವಾಸಿ ರಂಗ ಶೆಟ್ಟಿ ಮೃತಪಟ್ಟ ಬೈಕ್ ಸವಾರ.
ರಂಗ ಸೆಟ್ಟಿಯವರು ಚನ್ನರಾಯಪಟ್ಟಣದಿಂದ ಕಲ್ಲೇಸೋಮನಹಳ್ಳಿಗೆ ಹೋಗುವ ವೇಳೆ ದುರಂತ ಸಂಭವಿಸಿದೆ. ಈ ಮರವನ್ನು ತೆರವುಗೊಳಿಸುವಂತೆ ಅರಣ್ಯ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದರೂ ತೆರವು ಕಾರ್ಯ ನಡೆದಿರಲಿಲ್ಲ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ಸ್ಥಳೀಯರು ಈ ಬಗ್ಗೆ ಗಮನಕ್ಕೆ ತಂದಾಗಲೇ ಅರಣ್ಯ ಇಲಾಖೆ ಮರವನ್ನು ತೆರವುಗೊಳಿಸಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ರಸ್ತೆ ತಡೆ ನಡೆಸಿ, ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಪ್ರತಿನಿತ್ಯ ಬಸ್ಸು ಹತ್ತುವುದಕ್ಕೆ ಹತ್ತಾರು ಮಂದಿ ಮರದ ಕೆಳಗೆ ಕುಳಿತಿರುತ್ತಿದ್ದರು. ಭಾನುವಾರ ರಜಾದಿನವಾದ್ದರಿಂದ ಹೆಚ್ಚಿನ ಜನರು ಇರದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.