ಗ್ರಾಮ ಸ್ವರಾಜ್, ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ: ವಿಧಾನ ಪರಿಷತ್ ಸದಸ್ಯರ ವಿರೋಧ
ಗ್ರಾಮ ಸ್ವರಾಜ್, ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ: ವಿಧಾನ ಪರಿಷತ್ ಸದಸ್ಯರ ವಿರೋಧ
ಗ್ರಾಮ ಪಂಚಾಯತಿಯ ಸದಸ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತೆಗೆದು ಹಾಕುವ ನಿಯಮಗಳು 2022
ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಕಾಯ್ದೆ 1993 ಪ್ರಕರಣ 43(ಆ),48(4) ಹಾಗೂ 48(5)ಕ್ಕೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿಧಾನಪರಿಷತ್ ಸದಸ್ಯರು ವಿರೋಧಿಸಿದ್ದಾರೆ.
ಈ ಬಗ್ಗೆ ಹೊರಡಿಸಿರುವ 'ಗ್ರಾಮ ಪಂಚಾಯತಿಯ ಸದಸ್ಯ, ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತೆಗೆದು ಹಾಕುವ ನಿಯಮಗಳು 2022' ಕರಡು ಅಧಿಸೂಚನೆಯ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಶಾಸಕರುಗಳಾದ ಮಂಜುನಾಥ ಭಂಡಾರಿ, ಎಸ್. ರವಿ, ದಿನೇಶ್ ಗೂಳಿಗೌಡ ಮಂಡ್ಯ, ರಾಜೇಂದ್ರ ರಾಜಣ್ಣ, ಮಧು ಮಾದೇಗೌಡ, ಅನಿಲ್ ಕುಮಾರ್ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು
.
“ಈಗ ಪ್ರಕಟಿಸಲಾಗಿರುವ ಕರಡು ಅಧಿಸೂಚನೆಯಲ್ಲಿ ಪ್ರಕರಣ 43(ಎ) ಅಡಿ ದುರ್ನಡತೆ ಬಗ್ಗೆ ವ್ಯಾಖ್ಯಾನ ಇದ್ದರೂ ಯಾವುದೇ ರೀತಿಯ ಸ್ಪಷ್ಟತೆ ಇರುವುದಿಲ್ಲ. ನಿಯಮ 2(ಸಿ)ಯಲ್ಲಿ ತನಿಖಾಧಿಕಾರಿ ಮತ್ತು ವಿಚಾರಾಣಾಧಿಕಾರಿಯ ಬಗ್ಗೆ ಗೊಂದಲವಿದ್ದು, ಯಾವುದೇ ನಿರ್ದಿಷ್ಟತೆ ಇರುವುದಿಲ್ಲ. ದುರ್ನಡತೆ ಹೆಸರಿನಲ್ಲಿ ದೂರು ಸ್ವೀಕಾರ, ತನಿಖೆ ಹಾಗೂ ವಿಚಾರಣೆ ಜವಾಬ್ದಾರಿಯನ್ನು ಕೆಳ ಹಂತದ ಅಧಿಕಾರಿಗಳಿಗೆ ನೀಡುವ ಮೂಲಕ ಸರ್ಕಾರ ಗ್ರಾಮ ಪಂಚಾಯತ ಪ್ರತಿನಿಧಿಗಳ ಪ್ರಜಾಸತಾತ್ಮಕ ಹಕ್ಕುಗಳನ್ನು ಅಧಿಕಾರಿಗಳ ಮೂಲಕ ಮೊಟಕುಗೊಳಿಸುವ ಹುನ್ನಾರ ನಡೆಸಿದ್ದಾರೆ. ತನ್ಮೂಲಕ ವಿಕೇಂದ್ರಿಕರಣದ ವಿರುದ್ಧ ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲು ಹೊರಟಿದೆ” ಎಂದು ಶಾಸಕರುಗಳು ತಿಳಿಸಿದ್ದಾರೆ.
“ಪ್ರಕರಣ 43(ಎ) 48(4)(5) ರ ಅಡಿಯಲ್ಲಿ ದೂರು ಸ್ವೀಕರಿಸುವ ಅಧಿಕಾರ ಕಾಯ್ದೆಯಲ್ಲಿರುವಂತೆ ರಾಜ್ಯ ಸರ್ಕಾರಕ್ಕೆ ಮಾತ್ರ ಇರಬೇಕು ಮತ್ತು ಸದರಿ ದೂರಿನ ಮೇಲೆ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು. ಸರ್ಕಾರದ ಈ ಕರಡು ನಿಯಮದಲ್ಲಿ ಬದಲಾವಣೆ ತರಬೇಕೆಂದು” ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಆಕ್ಷೇಪಣಾ ಮತ್ತು ಸಲಹೆಗಳಲ್ಲಿ ಶಾಸಕರುಗಳು ವಿವರಿಸಿದ್ದಾರೆ.
ಶಾಸಕರ ಅಹವಾಲುಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.