ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಮಾಡಿ ಪರಾರಿಯಾಗಲೆತ್ನಿಸಿದ ಕುಖ್ಯಾತ ದನಕಳ್ಳ ಅರೆಸ್ಟ್
Wednesday, August 24, 2022
ಮಂಗಳೂರು: ದನಗಳವು ಪ್ರಕರಣದಲ್ಲಿ ದಸ್ತಗಿರಿಗೆ ತೆರಳಿರುವ ಪೊಲೀಸರಿಗೆ ಹಲ್ಲೆಗೈದು ಪರಾರಿಯಾಲೆತ್ನಿಸಿದ ಕುಖ್ಯಾತ ದನಕಳ್ಳನನ್ನು ಮಂಗಳೂರು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಮಂಗಳೂರು ನಗರದ ಬೆಂಗ್ರೆ ಕಸಬಾ ನಿವಾಸಿ ಅಬ್ದುಲ್ ಕಬೀರ್ ಅಲಿಯಾಸ್ ಪಾರಿವಾಳ ಕಬೀರ್(35) ಬಂಧಿತ ಆರೋಪಿ.
ಅಬ್ದುಲ್ ಕಬೀರ್ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧೆಡೆಗಳಲ್ಲಿ ದನಗಳವು ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತನಾಗಿ ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ. ಆದರೆ ಆ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ. ಆತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಲು ತೆರಳಿದ್ದರು. ಈ ವೇಳೆ ಆರೋಪಿ ಅಬ್ದುಲ್ ಕಬೀರ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆದರೆ ಪೊಲೀಸರು ಆತನನ್ನು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಆರೋಪಿಯ ವಿರುದ್ದ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಕಂಕನಾಡಿ ನಗರ, ಉಳ್ಳಾಲ, ಪಣಂಬೂರು, ಬಜ್ಪೆ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ 15 ಅಧಿಕ ದನಕಳ್ಳತನ ಪ್ರಕರಣಗಳು ದಾಖಲಾಗಿದೆ. ಈತ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 7 ತಿಂಗಳಿನಿಂದ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.