ಮಂಗಳೂರು: ಕಬ್ಬಿಣದ ರಾಡ್ ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ; ಪುಂಡ ತಂದೆ - ಮಗ ಅರೆಸ್ಟ್
Wednesday, August 17, 2022
ಮಂಗಳೂರು: ನಗರದ ಬೋಳೂರು ಜಾರಂದಾಯ ದೈವಸ್ಥಾನದ ಬಳಿ ವ್ಯಕ್ತಿಯೋರ್ವರ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪುಂಡಾಟ ಮೆರೆದ ತಂದೆ - ಮಗನನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೋಳೂರು ನಿವಾಸಿಗಳಾದ ದೇವದಾಸ್ ಬೋಳೂರು(61) ಹಾಗೂ ಸಾಯಿ ಕಿರಣ್ (21) ಬಂಧಿತ ಆರೋಪಿಗಳು. ನವೀನ್ ಸಾಲ್ಯಾನ್ ಎಂಬವರು ಗಾಯಗೊಂಡ ವ್ಯಕ್ತಿ.
ಬೋಳೂರು ಮೊಗವೀರ ಮಹಾಸಭಾ ಸಂಘದ ಆಡಳಿತ ಭಿನ್ನಾಭಿಪ್ರಾಯ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ತಂದೆ - ಮಗ ಪುಂಡಾಟ ಮೆರೆದಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಆದರೆ ಆ.16ರಂದು ಸಂಜೆ 6.25ರ ಸುಮಾರಿಗೆ ಇವರ ಮಧ್ಯೆ ವಾಗ್ವಾದ ಬೆಳೆದು ಬೋಳೂರು ಜಾರಂದಾಯ ದೈವಸ್ಥಾನದ ಹತ್ತಿರ ನವೀನ್ ಸಾಲ್ಯಾನ್ ಅವರ ಮೇಲೆ ದೇವದಾಸ್ ಬೋಳೂರು ಹಾಗೂ ಆತನ ಪುತ್ರ ಸಾಯಿ ಕಿರಣ್ ಕಬ್ಬಿಣದ
ರಾಡ್ ನಿಂದ ಹಲ್ಲೆಗೈದಿದ್ದಾರೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೈದಿರುವ ತಂದೆ - ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.