ಮಂಗಳೂರು: ಏಕಾಂಗಿಯಾಗಿ ಬೈಕ್ ರೈಡಿಂಗ್ ಮಾಡಿ ದೇಶ ಸುತ್ತಿ ಬಂದಳು ಈ ಯುವತಿ
Thursday, August 11, 2022
ಮಂಗಳೂರು: ಯುವತಿಯರು ಕಾರು, ಸ್ಕೂಟಿ ರೈಡಿಂಗ್ ಮಾಡ್ತಾರೆ. ಆದರೆ ಬೈಕ್ ರೈಡಿಂಗ್ ಅಷ್ಟಕಷ್ಟೇ. ಆದರೆ ಇಲ್ಲೊಬ್ಬ 21ವರ್ಷದ ಯುವತಿ ಬೈಕ್ ರೈಡಿಂಗ್ ಅನ್ನು ಹವ್ಯಾಸವಾಗಿ ತೆಗೆದುಕೊಂಡಿರುವುದು ಮಾತ್ರವಲ್ಲದೆ ಏಕಾಂಗಿಯಾಗಿಯೇ ಬೈಕ್ ರೈಡಿಂಗ್ ನಲ್ಲಿ ಈಶಾನ್ಯ ಭಾರತ, ನೇಪಾಳ, ಬರ್ಮಾ, ಚೀನಾ, ಮಯನ್ಮಾರ್ ಗಡಿಭಾಗವನ್ನು ಸುತ್ತಿ ಬಂದಿದ್ದಾಳೆ.
ಹೌದು... ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ಅಮೃತಾ ಜೋಶಿ ಈ ಸಾಧನೆ ಮಾಡಿದವರು. ಫೆ.4ರಂದು ತನ್ನ ಏಕಾಂಗಿ ಬೈಕ್ ರೈಡಿಂಗ್ ಆರಂಭಿಸಿದ ಅವರು ನಿನ್ನೆ ಮಂಗಳೂರು ತಲುಪಿದ್ದಾರೆ. ಬರೋಬ್ಬರಿ 23 ಸಾವಿರ ಕಿ.ಮೀ. ಬೈಕ್ ರೈಡಿಂಗ್ ಮಾಡಿರುವ ಅಮೃತಾ ಜೋಶಿಯವರಿಗೆ ನಿನ್ನೆ ಅವರು ಕಲಿತ ಕೆನರಾ ಶಾಲೆಯಲ್ಲಿ ಅದ್ದೂರಿ ಸ್ವಾಗತ. ದೊರಕಿತು.
ಫೆ.4ರಂದು ಕೇರಳದ ಕಲ್ಲಿಕೋಟೆಯಲ್ಲಿ ಪ್ರಯಾಣ ಆರಂಭಿಸಿದ ಅಮೃತಾ ಜೋಶಿ ತಮಿಳುನಾಡು, ಆಂಧ್ರಪ್ರದೇಶ ಮೂಲಕ ಈಶಾನ್ಯ ಭಾರತದ ಕಡೆಗೆ ಹೋಗಿದ್ದಾರೆ. ಅಲ್ಲಿಂದ ಚೀನಾ ಬಾರ್ಡರ್ ತವಾಂಗ್ ನಲ್ಲಿ ಪ್ರಯಾಣ ಅಂತ್ಯಗೊಳಿಸುವ ಇಚ್ಛೆ ಹೊಂದಿದ್ದರು. ಆದರೆ ಮತ್ತೆ ಅವರು ಮತ್ತೆ ಎಪ್ರಿಲ್ 8ರಂದು ಪ್ರಯಾಣ ಮುಂದುವರೆಸುತ್ತಾರೆ. ಅಲ್ಲಿಂದ ನೇಪಾಳ, ಮಯನ್ಮಾರ್, ಬರ್ಮಾ, ಬಾಂಗ್ಲಾ ಗಡಿ ಪ್ರದೇಶಗಳನ್ನು ಹಾದು ಉತ್ತರ ಪ್ರದೇಶಕ್ಕೆ ಬರುವಾಗ ಇವರ ಕೆಟಿಎಂ ಬೈಕ್ ಗೆ ಕಾರು ಢಿಕ್ಕಿ ಹೊಡೆದು ಅಪಘಾತವಾಗುತ್ತದೆ. ಬೈಕ್ ಸಂಪೂರ್ಣ ಹಾಳಾಗಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಒಂದು ತಿಂಗಳ ವಿಶ್ರಾಂತಿ ಪಡೆಯುತ್ತಾರೆ. ಆ ಬಳಿಕ ತಮ್ಮ ಭಾವೀ ಪತಿಯ ಬಿಎಂಡಬ್ಲ್ಯ ಬೈಕ್ ನಲ್ಲಿ ಮತ್ತೆ ಅಪಘಾತವಾದ ಸ್ಥಳದಿಂದಲೇ ಪ್ರಯಾಣ ಮುಂದುವರೆಸುತ್ತಾರೆ.
ಅಲ್ಲಿಂದ ಮತ್ತೆ ಪಂಜಾಬ್, ಲಡಾಕ್, ರಾಜಸ್ಥಾನ ಪ್ರದೇಶಗಳಲ್ಲಿ ಬೈಕ್ ರೈಡಿಂಗ್ ಮಾಡಿ ಕರ್ನಾಟಕ ತಲುಪಿ ಮಂಗಳೂರಿಗೆ ಬಂದಿದ್ದಾರೆ. ಆ ಬಳಿಕ ಕೇರಳದಲ್ಲಿ ಇಂದು ತಮ್ಮ ಪ್ರಯಾಣವನ್ನು ಕೊನೆ ಮಾಡಲಿದ್ದಾರೆ. ಪ್ರಾದೇಶಿಕ ಸಮಾನತೆ ಹಾಗೂ ದೇಶದ ಸೈನಿಕರಿಗೆ ಗೌರವ ಸೂಚಿಸಲೆಂದು ಈ ಏಕಾಂಗಿ ಬೈಕ್ ಪ್ರಯಾಣವನ್ನು ಮಾಡಿದ್ದಾಗಿ ಅಮೃತಾ ಜೋಶಿ ಹೇಳುತ್ತಾರೆ.