ಪ್ರವೀಣ್ ನೆಟ್ಟಾರು ಹತ್ಯೆಯ ಮೂವರು ಪ್ರಮುಖ ಹಂತಕರು ಅರೆಸ್ಟ್
Thursday, August 11, 2022
ಮಂಗಳೂರು: ಬಿಜೆಪಿ ಯುವಮೋರ್ಚ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಹಂತಕರನ್ನು ಖಾಕಿ ಪಡೆ ಹೆಡೆಮುರಿಕಟ್ಟಿ ಬಂಧಿಸಿದೆ. ಈ ಮೂಲಕ ಬಂಧಿತರ ಸಂಖ್ಯೆ10ಕ್ಕೆ ಏರಿಕೆಯಾಗಿದೆ.
ಸುಳ್ಯ ನಿವಾಸಿ ಶಿಯಾಬುದ್ದೀನ್ ಆಲಿ (33), ರಿಯಾಝ್ ಅಂಕತಡ್ಕ (29), ಸುಬ್ರಹ್ಮಣ್ಯ ಎಳಿಮಲೆ ನಿವಾಸಿ ಬಶೀರ್(29) ಬಂಧಿತ ಪ್ರಮುಖ ಆರೋಪಿಗಳು.
ಮೂವರೂ ಆರೋಪಿಗಳು ಪದೇ ಪದೇ ತಮ್ಮ ಜಾಗ ಬದಲಾಯಿಸುತ್ತಿದ್ದುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದ್ದರಿಂದ ಪೊಲೀಸರು ತಂಡ ರಚಿಸಿ ಅವರ ಬಂಧನಕ್ಕೆ ಬಲೆ ಬೀಸಿತ್ತು. ಇಂದು ಖಚಿತ ಮಾಹಿತಿಯ ಮೇರೆಗೆ ತಲಪಾಡಿಯ ಬಳಿ ಅವರನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಿಯಾಝ್ ಅಂಕತಡ್ಕ ಚಿಕನ್ ಸ್ಟಾಲ್ ಗಳಿಗೆ ಕೋಳಿ ಸಪ್ಲೈ ಮಾಡುತ್ತಿದ್ದು, ಬಶೀರ್ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಶಿಯಾಬುದ್ದೀನ್ ಕೊಕೊ ಸಪ್ಲೈ ಮಾಡುವ ಕೆಲಸ ನಿರ್ವಹಿಸುತ್ತಿದ್ದ. ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು. ಬಂಧಿತರಿಗೆ ಆಶ್ರಯ ನೀಡಿದವರು, ಸಹಕರಿಸಿದವರ ಕುರಿತಂತೆ ಸಮಗ್ರ ವಿಚಾರಣೆ ನಡೆಸಿ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗುವುದು ಎಂದು ಎಡಿಜಿಪಿ ವಿವರಿಸಿದರು.
ಪ್ರವೀಣ್ ನನ್ನೇ ಯಾಕೆ ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಕೂಡ ಪಡೆಯಲಾಗುವುದು. ಬಂಧಿತರ ಹಿನ್ನೆಲೆಯ ಬಗ್ಗೆ ಕಸ್ಟಡಿಗೆ ಪಡೆದು ಮಾಹಿತಿ ಪಡೆಯಲಾಗುವುದು. ಬಂಧಿತ ಪ್ರಮುಖ ಆರೋಪಿಗಳು ಈ ಹಿಂದೆ ಯಾವುದೇ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆಯೂ ವಿಚಾರಣೆ ಮುಂದುವರಿಯಲಿದೆ. ಆರೋಪಿಗಳಿಗೆ ಪಿಎಫ್ಐ , ಎಸ್ ಡಿಪಿಐ ಜತೆ ಸಂಪರ್ಕ ಇರುವ ಶಂಕೆ ಇದೆ. ಈ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಲಾಗುವುದು ಆದ್ದರಿಂದ ಈ ಹಂತದಲ್ಲಿ ಏನನ್ನೂ ಹೇಳಲಾಗದು. ತನಿಖಾಧಿಕಾರಿ ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿ ವರದಿ ಸಲ್ಲಿಸಲಿದ್ದಾರೆ. ಹತ್ಯೆ ಆರೋಪಿಗಳು ಪ್ರಕರಣದ ಸಂದರ್ಭ ಹಾಗೂ ನಂತರ ಒಟ್ಟು ಐದು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರನ್ನು ಬಳಸಿರುವುದು ತನಿಖೆಯಿಂದ ಗೊತ್ತಾಗಿದೆ. ಅದನ್ನು ಶೀಘ್ರವೇ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಡಿಜಿಪಿ ತಿಳಿಸಿದರು.