ಮಂಗಳೂರು: ಇಂಟರ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳದ ಆರೋಪಿ ವಕೀಲ ರಾಜೇಶ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ
Thursday, August 18, 2022
ಮಂಗಳೂರು: ಇಂಟರ್ ಶಿಪ್ ಗೆಂದು ಬಂದಿದ್ದ ನಗರದ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿನಿಗೆ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ವಕೀಲ ಕೆಎಸ್ಎನ್ ರಾಜೇಶ್ ವಿರುದ್ಧ ಪೊಲೀಸರು ಮಂಗಳೂರಿನ ಜೆಎಂಎಫ್‌ಸಿ 3ನೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
2021ರ ಸೆ.25 ರಂದು ಮಧ್ಯಾಹ್ನ ವಕೀಲ ಕೆಎಸ್ಎನ್ ರಾಜೇಶ್ ಸಂತ್ರಸ್ತೆಗೆ ತನ್ನ ಕಚೇರಿಯಲ್ಲಿಯೇ ಲೈಂಗಿಕ ಕಿರುಕುಳ ನೀಡಿ, ಯಾರಿಗೂ ತಿಳಿಸದಂತೆ ಜೀವಬೆದರಿಕೆಯನ್ನೂ ಒಡ್ಡಿದ್ದ ಎಂದು ಆರೋಪಿಸಿ ವಿದ್ಯಾರ್ಥಿನಿ ಪೊಲೀಸ್ ದೂರು ದಾಖಲಿಸಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಕೆಎಸ್ಎನ್ ರಾಜೇಶ್ ಕೆಲವು ಸಮಯದವರೆಗೆ ತಲೆ ಮರೆಸಿಕೊಂಡು ಬಳಿಕ ಪೊಲೀಸರಿಗೆ ಸೆರೆಸಿಕ್ಕಿದ್ದ.
ಅಲ್ಲದೆ ವಕೀಲ ತಾನು ಎಸಗಿರುವ ಕೃತ್ಯವನ್ನು ಮರೆಗೊಳಿಸುವ ಉದ್ದೇಶದಿಂದ ಸಂತ್ರಸ್ತೆಯ ಸ್ನೇಹಿತೆಯಿಂದಲೇ ಒತ್ತಾಯದಿಂದ ಸಹಿಯನ್ನು ಪಡೆದುಕೊಂಡಿದ್ದ. ಆ ಬಳಿಕ ಹರಿದಾಡಿದ ಆಡಿಯೋ ತುಣುಕಿನ ಬಗ್ಗೆಯೂ ಒತ್ತಾಯದಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ. ಆತನಿಗೆ ಅನಂತ ಭಟ್ ಮತ್ತು ಅಚ್ಯುತ ಭಟ್ ನೆರವು, ಆಶ್ರಯ ಒದಗಿಸಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ತನಿಖೆಯನ್ನು ಅಂದಿನ ಎಸಿಪಿ ರಂಜಿತ್ ಬಂಡಾರು ಅವರಿಗೆ ವಹಿಸಿದ್ದರು. ಆ ಬಳಿಕ ಎಸಿಪಿ ದಿನಕರ ಶೆಟ್ಟಿ ತನಿಖೆಯನ್ನು ಮುಂದುವರಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.