ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ಸಾವು
Tuesday, August 23, 2022
ಚಂಡಿಗಢ: ಹರ್ಯಾಣದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್(43) ಅವರು ಗೋವಾದಲ್ಲಿ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸೊನಾಲಿ ಫೋಗಟ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಗೋವಾ ಪ್ರವಾಸದಲ್ಲಿದ್ದರು. ತಮ್ಮ ಸಾವಿಗೂ ಮುನ್ನ ಅವರು ಇನ್ ಸ್ಟಾಗ್ರಾಂನಲ್ಲಿ ಹಲವು ಫೋಟೋಸ್ ಹಾಗೂ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಸೊನಾಲಿ ಪೊಗಟ್ ಅವರ ಪತಿ ಸಂಜಯ್ ಫೋಗಟ್ 2016ರಲ್ಲಿ ನಿಧನರಾಗಿದ್ದರು. ಅವರಿಗೆ ಯಶೋಧರ ಫೋಗಟ್ ಎಂಬ ಪುತ್ರಿಯಿದ್ದಾರೆ.
ಸೋನಾಲಿ ಫೋಗಟ್ 2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆದಂಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆಗಿನ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ಅವರನ್ನು ಎದುರಿಸಿದ್ದರು. ಕಳೆದ ತಿಂಗಳು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಷ್ಣೋಯ್ ಇತ್ತೀಚೆಗೆ ಬಿಜೆಪಿಗೆ ಸೇರಿದ್ದರು. ಉಪ ಚುನಾವಣೆಯಲ್ಲಿ ಆದಂಪುರದಿಂದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಷ್ಣೋಯ್ ಕಳೆದ ವಾರ ಸೋನಾಲಿ ಫೋಗಟ್ ಅವರನ್ನು ಭೇಟಿ ಮಾಡಿದ್ದರು.
ಟಿಕ್ ಟಾಕ್ ಸ್ಟಾರ್ ಆಗಿದ್ದ ಸೊನಾಲಿ ಪೊಗಟ್ ಅವರು ರಾಜಕೀಯ ಸೇರುವ ಮುನ್ನ ಟಿವಿ ನಿರೂಪಕಿಯಾಗಿದ್ದರು.