ಬಿಜೆಪಿಗರಿಗೆ ತಾಕತ್ತಿದ್ದಲ್ಲಿ ಸಾವರ್ಕರ್ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಿ: ಹಿಂದೂ ಮಹಾಸಭಾ ನೇರ ಸವಾಲು
Wednesday, August 24, 2022
ಮಂಗಳೂರು: ಬಿಜೆಪಿಗರು ಸಾವರ್ಕರ್ ಅವರಿಗೆ ಗೌರವ ಕೊಡುವುದಾದಲ್ಲಿ, ನಿಜವಾಗಿಯೂ ಅವರಲ್ಲಿ ತಾಕತ್ತಿದ್ದರೆ ಸಾವರ್ಕರ್ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಬಿಜೆಪಿಗೆ ನೇರ ಸವಾಲೆಸೆದಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮಾತನಾಡಿ, ಬಿಜೆಪಿಯು ಕೇವಲ ರಾಜಕೀಯ ಲಾಭಕ್ಕಾಗಿ ಸಾವರ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದೆ. ಕೆಲ ವರ್ಷಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ವಿರುದ್ಧ ಹೀನಾಯವಾಗಿ ಮಾತನಾಡಿದ್ದರು.
ಆಗ ಅದರ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ ಮಾತ್ರ ಧ್ವನಿಯೆತ್ತಿತ್ತು. ಅಂದು ತುಟಿಪಿಟಿಕ್ ಎನ್ನದ ಬಿಜೆಪಿ ಈಗ ಮುಂಬರುವ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಸಾವರ್ಕರ್ ವಿಚಾರದಲ್ಲಿ ದೊಂಬರಾಟ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ಮಾಂಸ ತಿಂದರೆ ಬಿಜೆಪಿಗೇನು ಆಗಬೇಕು. ಅದನ್ನು ವಿವಾದವೇಕೆ ಮಾಡಬೇಕು. ಬಿಜೆಪಿಯವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲವೇ?. ಅವರಿಗೆ ಆತ್ಮಸಾಕ್ಷಿಯಿದ್ದರೆ ಒಪ್ಪಿಕೊಳ್ಳಲಿ. ಒಂದು ವೇಳೆ ಹೋಗಿದ್ದೇ ಆದಲ್ಲಿ ಸಿದ್ದರಾಮಯ್ಯರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ ?
ಹಾಗೆಂದು ನಾನು ಸಿದ್ದರಾಮಯ್ಯರನ್ನು ಪ್ರೋತ್ಸಾಹಿಸುತ್ತಿಲ್ಲ. ಅವರೊಬ್ಬ ಹೆದರುಪುಕ್ಕಲ. ಕೇವಲ ಮೊಟ್ಟೆ ಎಸೆದಿರುವುದಕ್ಕೆ ಹೆದರಿ ಓಡಿ ಬಂದಿರುವ ಸಿದ್ದರಾಮಯ್ಯರು ಸ್ವಾತಂತ್ರ್ಯ ವೀರ ಸಾವರ್ಕರ್ ಹೆಸರು ಹೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ.
ಕೇಂದ್ರ ಸರಕಾರ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ಸಾವರ್ಕರ್ ಸೇರಿದಂತೆ ಯಾವುದೇ ಕ್ರಾಂತಿಕಾರಿಗಳ ಬಗ್ಗೆ ವಿವಾದಿತ ಹೇಳಿಕೆ ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಧರ್ಮೇಂದ್ರ ಒತ್ತಾಯಿಸಿದರು.