
ಪತ್ನಿಯನ್ನು ರಕ್ಷಿಸಲು ಹೋಗಿ ಅಸುನೀಗಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ: ಸಾವಿನಲ್ಲೂ ಒಂದಾದ ಪತಿ-ಪತ್ನಿ
Monday, August 29, 2022
ಬಳ್ಳಾರಿ: ಪತ್ನಿಯನ್ನು ಕಾಪಾಡಲು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ(68) ಎಂಬವರು ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಅವರ ಪತ್ನಿ ದ್ಯಾವಮ್ಮ(65)ನವರೂ ಮೃತಪಟ್ಟಿದ್ದಾರೆ.
ಬಳ್ಳಾರಿಯ ಕೌಲ್ ಬಜಾರ್‌ನ ಬಂಡಿಹಟ್ಟಿಯ ಮನೆಯ ಮೇಲೆ ನಿಂತಿದ್ದ ಮಳೆ ನೀರನ್ನು ಹೊರ ಚೆಲ್ಲಲೆಂದು ದ್ಯಾವಮ್ಮನವರು ಹೋಗಿದ್ದರು. ಈ ಸಂದರ್ಭ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಅವರು ಸ್ಪರ್ಶಿಸಿದ್ದಾರೆ, ಅವರಿಗೆ ಶಾಕ್ ಹೊಡೆದಿದೆ. ಈ ವೇಳೆ ಪತ್ನಿಯನ್ನು ರಕ್ಷಿಸಲು ಹೋದ ಪಂಪಾಪತಿಯವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.
ಪಂಪಾಪತಿಯವರು ಬಯಲಾಟ ಕಲಾವಿದರಾಗಿದ್ದು, ಸಾವಿರಕ್ಕೂ ಅಧಿಕ ಬಯಲಾಟ ಪ್ರದರ್ಶನಗಳನ್ನು ಇವರು ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇವರಿಗೆ 2018 ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಬಯಲಾಟ ಕಲಾವಿದರಾಗಿ ಹಲವು ದಶಕಗಳ ಕಾಲ ಸಾರಥಿ ಪಾತ್ರವನ್ನು ಅಭಿನಯಿಸಿದ್ದರಿಂದ ಇವರಿಗೆ ಸಾರಥಿ ಪಂಪಾಪತಿ ಎಂದೇ ಜನರು ಗುರುತಿಸುತ್ತಿದ್ದರು. ಮೃತರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಈ ಬಗ್ಗೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.