
ಉತ್ತರಪ್ರದೇಶ: ಗುಜರಿ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕೂಡು ಕುಟುಂಬದ ಐವರು ಮೃತ್ಯು; ಏಳು ಮಂದಿಗೆ ಗಾಯ
Friday, August 26, 2022
ಮೊರದಾಬಾದ್: ಉತ್ತರಪ್ರದೇಶ ರಾಜ್ಯದ ಮೊರದಾಬಾದ್ ನಗರದ ಗಲ್‌ಶಹೀದ್ ಎಂಬಲ್ಲಿ ಮೂರು ಮಹಡಿಯ ಕಟ್ಟಡವೊಂದರಲ್ಲಿ ಸಂಭವಿಸಿರುವ ಭೀಕರ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಐವರು ಸಜೀವ ದಹನಗೊಂಡು ಇಬ್ಬರು ತೀವ್ರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ಕಟ್ಟಡಕ್ಕೆ ಹತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಮೂರು ಗಂಟೆ ಕಾಲ ಶ್ರಮಿಸಬೇಕಾಯಿತು.
ಈ ದುರ್ಘಟನೆಯಲ್ಲಿ 12 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ಐದು ಮಂದಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಗಾಯಾಳುಗಳನ್ನು ಮೊರದಾಬಾದ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ನಾಲ್ವರು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟರೆ, ಚಿಕಿತ್ಸೆ ವೇಳೆ ಒಬ್ಬ ಕೊನೆಯುಸಿರೆಳೆದಿದ್ದಾನೆ .
ಈ ಕಟ್ಟಡದ ಮಾಲಕ ನೆಲಮಹಡಿಯಲ್ಲಿ ಗುಜರಿ ಸಾಮಗ್ರಿಗಳನ್ನು ದಾಸ್ತಾನು ಇಟ್ಟಿದ್ದ ಇದೇ ಕಟ್ಟಡದ ಮೂರು ಮಹಡಿಗಳಲ್ಲಿ ಅವರ ಕುಟುಂಬ ವಾಸವಿತ್ತು. ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ. ಮೂವರು ಸಹೋದರರ ಅವಿಭಕ್ತ ಕುಟುಂಬ ಈ ಮನೆಯಲ್ಲಿ ವಾಸವಿತ್ತು. ಇದುವರೆಗೆ ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ಕಾರಣದ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮೊರದಾಬಾದ್ ಜಿಲ್ಲಾಧಿಕಾರಿ ಶೈಲೇಂದ್ರ ಸಿಂಗ್ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕ ಹೇಮಂತ ಕುತಿಯಾಲ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ವೀಕ್ಷಿಸದ್ದಾರೆ.