ಗುಮಾಸ್ತನ ಮನೆಯಲ್ಲಿ ಬಂಡಲ್ ಗಟ್ಟಲೆ ಹಣ: ದಾಳಿ ವೇಳೆ ವಿಷ ಸೇವಿಸಿದ ಸರಕಾರಿ ನೌಕರ
Thursday, August 4, 2022
ಭೋಪಾಲ್: ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಸರಕಾರಿ ಗುಮಾಸ್ತನ ನಿವಾಸಕ್ಕೆ ಮಧ್ಯಪ್ರದೇಶದ ಎಕನಾಮಿಕ್ಸ್ ಅಫೆನ್ಸ್ ವಿಂಗ್ ( ಇಒಡಬ್ಲ್ಯು ) ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 85 ಲಕ್ಷ ರೂ.ಗೂ ಅಧಿಕ ಹಣ ಪತ್ತೆಯಾಗಿದೆ. ಪೊಲೀಸರು ಮನೆಯನ್ನು ಶೋಧಿಸುತ್ತಿದ್ದ ವೇಳೆ ಸರಕಾರಿ ಗುಮಾಸ್ತ ವಿಷ ಸೇವನೆ ಮಾಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೋಪಾಲ್‌ನ ಬೈರಾಗರ್ ಪ್ರದೇಶ ನಿವಾಸಿ ಹಾಗೂ ಉನ್ನತ ವಿಭಾದ ಗುಮಾಸ್ತ ಕೇಸ್ವಾನಿ ಮನೆಗೆ ದಾಳಿ ನಡೆದಿದೆ. ಈತ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸದ್ಯ 50 ಸಾವಿರ ರೂ. ಸಂಬಳ ಪಡೆಯುತ್ತಿದ್ದಾನೆ. ಆದರೆ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಮೇಲೆ ಇಒಡಬ್ಲ್ಯು ಅಧಿಕಾರಿಗಳು ಆತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಒಡಬ್ಲ್ಯು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ಮಧ್ಯರಾತ್ರಿಯವರೆಗೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಮನೆಯಲ್ಲಿ ಸಿಕ್ಕಿರುವ ಹಣದ ನಿಖರವಾದ ಮೌಲ್ಯ ತಿಳಿಯಲು ಕೌಂಟಿಂಗ್ ಯಂತ್ರವನ್ನು ತರಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಒಡಬ್ಲ್ಯೂ ಅಧಿಕಾರಿಗಳು ದಾಳಿ ಮಾಡಲೆಂದು ಮನೆ ಪ್ರವೇಶಿಸುತ್ತಿದ್ದಂತೆ ಕೇಸ್ವಾನಿ ಬಾತ್‌ರೂಮ್ ಕ್ಲೀನರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೆ, ತನ್ನ ಮನೆಯನ್ನು ಶೋಧಿಸದಂತೆ ಅಧಿಕಾರಿಗಳನ್ನು ತಡೆದಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ಸರ್ಕಾರಿ ಒಡೆತನದ ಹಮೀಡಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯವಸ್ಥಿತಿ ಸದ್ಯ ಸ್ಥಿರವಾಗಿದೆ ಮತ್ತು ರಕ್ತದೊತ್ತಡ ಸಂಬಂಧಿತ ಸಮಸ್ಯೆಗಳಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಒಡಬ್ಲ್ಯು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಮಿಶ್ರಾ ತಿಳಿಸಿದ್ದಾರೆ .
ಕೇಸ್ವಾನಿ ಮನೆಯಲ್ಲಿ ಸುಮಾರು 85 ಲಕ್ಷ ರೂ.ಗೂ ಅಧಿಕ ಹಣ ದೊರೆತಿದೆ. ಅಲ್ಲದೆ , ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸ್ಥಿರ ಆಸ್ತಿಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಸಹ ಅಧಿಕಾರಿಗಳಿಗೆ ಸಿಕ್ಕಿವೆ . ಎಲ್ಲ ಆಸ್ತಿಗಳ ಮೌಲ್ಯ 4 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ದುಬಾರಿ ಅಲಂಕಾರಿಕ ಪರಿಕರಗಳು ಪತ್ತೆಯಾಗಿವೆ. ಅವುಗಳ ಬೆಲೆ 1.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕೇಶ್ವಾನಿ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಲಕ್ಷ ಲಕ್ಷ ರೂ . ಡೆಪಾಸಿಟ್ ಆಗಿದೆ. ಯಾವುದೇ ಆದಾಯದ ಮೂಲವಿಲ್ಲದ ತಮ್ಮ ಪತ್ನಿ ಹೆಸರಿನಲ್ಲಿ ಹೆಚ್ಚಿನ ಆಸ್ತಿಗಳನ್ನು ಖರೀದಿಸಿದ್ದಾನೆ. ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಆಸ್ತಿಗಳ ಒಟ್ಟಾರೆ ಮೌಲ್ಯವು. ಮೌಲ್ಯಮಾಪನ ಕಾರ್ಯ ಮತ್ತು ದಾಖಲೆಗಳ ಪರಿಶೀಲನೆಯ ನಂತರವಷ್ಟೇ ತಿಳಿಯುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.