
ಗೂಗಲ್ ಮ್ಯಾಪ್ ನಂಬಿ ಕೆಟ್ಟ ಕುಟುಂಬ: ಪ್ರವಾಹದಲ್ಲಿ ಸಿಲುಕಿ ತೊಂದರೆ ಅನುಭವಿಸಿ ಪಾರಾಯ್ತು ಜೀವ
Wednesday, August 31, 2022
ಹೊಸೂರು(ತಮಿಳುನಾಡು): ಇತ್ತೀಚೆಗೆ ಯಾವುದೇ ಸ್ಥಳಗಳಿಗೆ ಹೋಗುವುದಿದ್ದರೆ ಗೂಗಲ್ ಮ್ಯಾಪ್ ಹಾಕಿಕೊಂಡು ದಾರಿ ಹುಡುಕುವವರೇ ಅನೇಕ ಮಂದಿ. ಈ ರೀತಿ ಹೋದ ಕೆಲವರು ತೊಂದರೆಗೆ ಸಿಲುಕಿಕೊಂಡದ್ದೂ ಇದೆ. ಇದೀಗ ಬೆಂಗಳೂರಿನ ಸರ್ಜಾಪುರದ ಕುಟುಂಬವೊಂದು ಗೂಗಪ್‌ಮ್ಯಾಪ್‌ನಿಂದಾಗಿ ಜೀವ ಕಳೆದುಕೊಳ್ಳುವ ಮಟ್ಟಿಗೆ ಹೋಗಿ ಅದೃಷ್ಟವಶಾತ್ ಪಾರಾಗಿರುವ ಆತಂಕಕಾರಿ ಘಟನೆಯೊಂದು ನಡೆದಿದೆ.
ಬೆಂಗಳೂರಿನ ಸರ್ಜಾಪುರದ ರಾಜೇಶ್ ಎಂಬವರು ಹೊಸೂರಿಗೆ ಹೋಗಿ ಕುಟುಂಬ ಸಹಿತ ಕಾರಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಪರಿಣಾಮ ಹಲವೆಡೆ ರಸ್ತೆಗಳು ಜಲಾವೃತಗೊಂಡಿದೆ. ಅದರಲ್ಲೂ ಹೊಸೂರು ಬಳಿಯ ಬಾಗೇಪಲ್ಲಿ ಭೂಸೇತುವೆಯಲ್ಲಿ 5 ಅಡಿಗೂ ಅಧಿಕ ಆಳದವರೆಗೆ ನೀರು ನಿಂತಿತ್ತು. ಪರಿಣಾಮ ದಾರಿ ಎಲ್ಲಿದೆಯೆಂದು ರಾಜೇಶ್ ಅವರಿಗೆ ತಿಳಿಯಲಿಲ್ಲ.
ಅದಕ್ಕಾಗಿ ಅವರು ಗೂಗಲ್ ಮ್ಯಾಪ್ ಮೊರೆ ಹೋಗಿದ್ದಾರೆ. ಅದು ಮುಂದೆ ಹೋಗಿ ಎಂದು ಹೇಳಿದೆ. ನಿಜವಾಗಿಯೂ ಗೂಗಲ್ ಮ್ಯಾಪ್ ಸರಿಯಾದ ದಾರಿಯನ್ನೇ ಹೇಳಿದೆ. ಏಕೆಂದರೆ ಅಲ್ಲಿ ಪ್ರವಾಹದ ನೀರು ತುಂಬಿ ಹರಿಯುತ್ತಿರುವುದು ಮ್ಯಾಪ್‌ಗೆ ಹೇಗೆ ತಿಳಿಯಬೇಕು . ಆದರೆ ರಾಜೇಶ್ ಅವರಿಗೆ ಕತ್ತಲಲ್ಲಿ ದಾರಿ ಗೊತ್ತಾಗದ ಕಾರಣ, ಮ್ಯಾಪ್ ಹೇಳಿದಂತೆ ಹೋಗಿದ್ದಾರೆ .
ಆದರೆ ಕಾರು ನೀರೊಳಗೆ ಬೀಳುತ್ತಿರುವುದು ತಿಳಿಯುತ್ತಲೇ ಅವರು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಕರೆ ಮಾಡಿದ್ದರಿಂದ ಜೀವ ಉಳಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿರುವ ರಕ್ಷಣಾ ತಂಡದಿಂದ ಅವರು ಜೀವಸಹಿತ ಪಾರಾಗಿದ್ದಾರೆ. ರಕ್ಷಣಾ ತಂಡವು ಭಾರಿ ವಾಹನಗಳ ಸಹಾಯದಿಂದ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರನ್ನೂ ಹೊರತೆಗೆದಿದ್ದಾರೆ. ಅಂತೂ ಸಂಭಾವ್ಯ ಅಪಾಯವೊಂದು ತಪ್ಪಿದಂತಾಗಿದೆ.