ಹನಿಟ್ರ್ಯಾಪ್ ಗೊಳಗಾದ ಬಿಜೆಪಿ ಮುಖಂಡ: ಡ್ರಾಪ್ ಕೊಡುವ ನೆಪದಲ್ಲಿ ಲಾಡ್ಜ್ ಗೆ ಅಪಹರಿಸಿ ಕೃತ್ಯ, 'ಸಿಕ್ಕಿಬಿದ್ದ ಮಹಿಳೆ'
Monday, August 22, 2022
ಮಂಡ್ಯ: ಡ್ರಾಪ್ ನೀಡುವ ನೆಪದಲ್ಲಿ ಮಂಡ್ಯದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡರೋರ್ವರು ಹನಿಟ್ರ್ಯಾಪ್ ಬಲೆಗೆ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದೆ ನಡೆದಿತ್ತು ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಾಪ್ ನೀಡುವ ನೆಪದಲ್ಲಿ ಬಿಜೆಪಿ ಮುಖಂಡ ಹಾಗೂ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ್ ಶೆಟ್ಟಿ ಎನ್ನುವವರನ್ನು ಅಪಹರಣಗೈದು ಲಾಡ್ಜ್‌ಗೆ ಕರೆದೊಯ್ದು ಯುವತಿಯನ್ನು ಬಿಟ್ಟು ವೀಡಿಯೋ ಚಿತ್ರೀಕರಿಸಲಾಗಿತ್ತು. ಆ ಬಳಿಕ ಬೆದರಿಕೆಯೊಡ್ಡಿ 50 ಲಕ್ಷ ರೂ. ವಸೂಲಿ ಮಾಡಿರುವುದಾಗಿ ತಿಳಿದು ಬಂದಿದೆ. ಈ ಘಟನೆ ಫೆಬ್ರವರಿ 26 ರಂದು ಮೈಸೂರಿನಲ್ಲಿ ನಡೆದಿತ್ತು ಎನ್ನಲಾಗಿದೆ. ಆರು ತಿಂಗಳ ಬಳಿಕ ಜಗನ್ನಾಥ ಶೆಟ್ಟಿಯವರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ಸಲ್ಮಾಭಾನು ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಜಗನ್ನಾಥ ಶೆಟ್ಟಿಯವರು ಮಂಗಳೂರಿಗೆ ತೆರಳಲೆಂದು ಫೆ.26ರಂದು ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ನಾಲ್ವರು ಅವರನ್ನು ಕರೆದೊಯ್ದಿದ್ದಾರೆ. ಮೈಸೂರಿನ ದರ್ಶನ್ ಪ್ಯಾಲೇಸ್‌ಗೆ ಕರೆದುಕೊಂಡು ಹೋಗಿದ್ದ ಗ್ಯಾಂಗ್ ಯುವತಿಯೊಬ್ಬಳನ್ನು ಅಲ್ಲಿ ಬಿಟ್ಟಿದ್ದರು.
ಬಳಿಕ ಅವರು ಜೊತೆಗಿರುವ ವೀಡಿಯೋ ಚಿತ್ರೀಕರಣ ಮಾಡಲಾಗಿತ್ತು. ಆ ವೀಡಿಯೋವನ್ನು ತೋರಿಸಿ 4 ಕೋಟಿಗೆ ಬೇಡಿಕೆ ಇಡಲಾಗಿತ್ತು. ಅಂತಿಮವಾಗಿ 50 ಲಕ್ಷ ಕೊಟ್ಟು ಬಂದಿರುವುದಾಗಿ ಜಗನ್ನಾಥ ಶೆಟ್ಟಿಯವರು ದೂರಿನಲ್ಲಿ ಹೇಳಿದ್ದಾರೆ. ಇದಾದ ಬಳಿಕ ಪುನಃ ಹಣಕ್ಕೆ ಬೇಡಿಕೆ ಇಟ್ಟ ಕಾರಣ ಇದೀಗ ದೂರು ದಾಖಲು ಮಾಡಿದ್ದಾರೆ . ಹಣ ಪಡೆದ ಬಳಿಕ ಕೊಲೆ ಬೆದರಿಕೆ ಹಾಕಲಾಗಿತ್ತು . ಆದ್ದರಿಂದ ತಾವು ದೂರು ದಾಖಲು ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.